ಇಂದಿನ ಪರಿಸ್ಥಿತಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯೊಂದಿಗೆ ಕ್ಷೇತ್ರ ಮರುವಿಂಗಡಣೆಯನ್ನು (ಡಿಲಿಮಿಟೇಶನ್) ಸೇರಿಸಿರುವುದು ಮತ್ತೊಂದು ಪ್ರಶ್ನಾರ್ಹ ವಿಚಾರವಾಗಿದೆ. ಈ ಎರಡೂ ವಿಷಯಗಳು ಸ್ವತಂತ್ರವಾಗಿದ್ದು, ಪ್ರತ್ಯೇಕವಾಗಿ ಚರ್ಚೆಗೆ ಒಳಪಡಬೇಕಾಗಿತ್ತು : ಮೂಸಕುಂಞ ಪೈಂಬೆಚ್ಚಾಲ್
ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿರುವುದು ಮೇಲ್ನೋಟಕ್ಕೆ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮಾಡಿದ ಮಹತ್ವದ ಹೆಜ್ಜೆಯಂತೆ ಕಂಡರೂ, ಅದರ ಹಿಂದಿರುವ ಉದ್ದೇಶಗಳ ಬಗ್ಗೆ ಗಂಭೀರ ಅನುಮಾನಗಳು ವ್ಯಕ್ತವಾಗುತ್ತಿವೆ. ಸಂಖ್ಯಾಬಲದ ಕೊರತೆಯಿಂದ ಮಸೂದೆ ಜಾರಿಗೆ ತರುವುದು ಸಾಧ್ಯವಿಲ್ಲ ಎಂಬ ಅರಿವು ಇದ್ದೂ ಸಹ ವಿಶೇಷ ಅಧಿವೇಶನ ಕರೆದಿರುವುದು ರಾಜಕೀಯ ಪ್ರಹಸನ ದಂತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಪಕ್ಷದ ಮೇಲೆ ಹೊಣೆ ಹಾಕುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪಗಳು ಬಲವಾಗಿವೆ. ಮಹಿಳಾ ಮೀಸಲಾತಿ ಎಂಬ ಸೂಕ್ಷ್ಮ ಹಾಗೂ ಮಹತ್ವದ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಜನತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿದೆ.
ಇತಿಹಾಸವನ್ನು ಗಮನಿಸಿದರೆ, ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವೇ ಸದಾ ಪ್ರಗತಿಪರ ನಿಲುವು ತಾಳಿರುವುದು ಸ್ಪಷ್ಟವಾಗುತ್ತದೆ. ರಾಜೀವ್ ಗಾಂಧಿ ಅವರ ಕಾಲದಲ್ಲಿಯೇ ಈ ಕುರಿತು ಚರ್ಚೆಗಳು ಪ್ರಾರಂಭವಾಗಿದ್ದವು. ನಂತರ ನರಸಿಂಹ ರಾವ್ ಅವರ ಆಡಳಿತಾವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 50ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಬಂದಿರುವುದು ಮಹತ್ವದ ಮೈಲಿಗಲ್ಲಾಗಿದೆ. ಇದೇ ಬಿಜೆಪಿ ಪಕ್ಷ ಆಗ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಮರೆಯಲು ಸಾಧ್ಯವಿಲ್ಲ.
ಇಂದಿನ ಪರಿಸ್ಥಿತಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯೊಂದಿಗೆ ಕ್ಷೇತ್ರ ಮರುವಿಂಗಡಣೆಯನ್ನು (ಡಿಲಿಮಿಟೇಶನ್) ಸೇರಿಸಿರುವುದು ಮತ್ತೊಂದು ಪ್ರಶ್ನಾರ್ಹ ವಿಚಾರವಾಗಿದೆ. ಈ ಎರಡೂ ವಿಷಯಗಳು ಸ್ವತಂತ್ರವಾಗಿದ್ದು, ಪ್ರತ್ಯೇಕವಾಗಿ ಚರ್ಚೆಗೆ ಒಳಪಡಬೇಕಾಗಿತ್ತು. ಕ್ಷೇತ್ರ ಮರುವಿಂಗಡಣೆಯನ್ನು ಬೇರೆ ಅಧಿವೇಶನದಲ್ಲಿ ಮಂಡಿಸಿದ್ದರೆ ಕಾಂಗ್ರೆಸ್ ಪಕ್ಷದಿಂದ ವಿರೋಧ ವ್ಯಕ್ತವಾಗುತ್ತಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಿನಲ್ಲಿ, ಮಹಿಳಾ ಮೀಸಲಾತಿ ಮಸೂದೆ ಕುರಿತು ಕೇಂದ್ರ ಸರ್ಕಾರದ ನಡೆ ನಿಜವಾದ ಬದ್ಧತೆಯನ್ನೇ ತೋರಿಸುತ್ತದೆಯೇ ಅಥವಾ ರಾಜಕೀಯ ಲಾಭದ ಲೆಕ್ಕಾಚಾರವೋ ಎಂಬ ಪ್ರಶ್ನೆ ಜನಮನದಲ್ಲಿ ಮೂಡಿದೆ. ಮಹಿಳಾ ಸಬಲೀಕರಣದಂತಹ ಮಹತ್ವದ ವಿಚಾರದಲ್ಲಿ ರಾಜಕೀಯ ಪ್ರಚಾರಕ್ಕಿಂತ ನಿಷ್ಠಾವಂತ ಕ್ರಮಗಳೇ ಅಗತ್ಯವಾಗಿದೆ.ಎಂದು ಕೆ.ಪಿ.ಸಿ.ಸಿ ಲೀಗಲ್ ಸೆಲ್ ಪ್ರಧಾನ ಕಾರ್ಯದರ್ಶಿ ಮೂಸಕುಂಞ ಪೈಂಬೆಚ್ಚಾಲ್ ಅವರು ಪ್ರತಿಕ್ರಿಯಿಸಿದ್ದಾರೆ.





m
