ಆರೋಗ್ಯ, ಇತರೆ, ಸ್ಥಳೀಯ

ಜು. 11ರಂದು ಸುಳ್ಯದಲ್ಲಿ ಲೋಕ ಅದಾಲತ್: ರಾಜಿ ಸಂಧಾನದ ಮೂಲಕ ತ್ವರಿತ ನ್ಯಾಯಕ್ಕೆ ಅವಕಾಶ

ಬ್ಯಾಂಕ್ ಸಾಲ, ಸಂಚಾರ ದಂಡ, ಕೌಟುಂಬಿಕ ಹಾಗೂ ಇತರೆ ವಿವಾದಗಳ ಇತ್ಯರ್ಥಕ್ಕೆ ಸಾರ್ವಜನಿಕರಿಗೆ ಸುವರ್ಣಾವಕಾಶ”.

ಸುಳ್ಯ, ಜು. 4: ನ್ಯಾಯಾಲಯಗಳಲ್ಲಿ ಹಾಗೂ ವ್ಯಾಜ್ಯಪೂರ್ವ ಹಂತದಲ್ಲಿರುವ ವಿವಿಧ ವಿವಾದಗಳನ್ನು ರಾಜಿ ಸಂಧಾನದ ಮೂಲಕ ತ್ವರಿತವಾಗಿ ಬಗೆಹರಿಸಲು ಅವಕಾಶ ಕಲ್ಪಿಸುವ ಪರ್ಯಾಯ ನ್ಯಾಯ ವೇದಿಕೆಯಾದ ಲೋಕ ಅದಾಲತ್ ಕಾರ್ಯಕ್ರಮವು ಜುಲೈ 11ರಂದು ಸುಳ್ಯ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ದಮಯಂತಿ ಸೋಮಯ್ಯ ತಿಳಿಸಿದ್ದಾರೆ.

ಜುಲೈ 4ರಂದು ಸುಳ್ಯ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ವತಿಯಿಂದ ದೇಶಾದ್ಯಂತ ಏಕಕಾಲದಲ್ಲಿ ಲೋಕ ಅದಾಲತ್ ಆಯೋಜಿಸಲಾಗುತ್ತಿದ್ದು, ಇದರ ಮೂಲಕ ಹಲವು ರೀತಿಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಲೋಕ ಅದಾಲತ್‌ನಲ್ಲಿ ಬ್ಯಾಂಕ್ ಸಾಲ ಮರುಪಾವತಿ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಭೂ ಸ್ವಾಧೀನ, ಕೌಟುಂಬಿಕ ವಿವಾದಗಳು, ವಿದ್ಯುತ್ ಮತ್ತು ನೀರಿನ ಬಿಲ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಕಾರ್ಮಿಕ ವಿವಾದಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ಅವರು ವಿವರಿಸಿದರು.
ಲೋಕ ಅದಾಲತ್‌ನಲ್ಲಿ ನೀಡಲಾಗುವ ತೀರ್ಪು ಅಂತಿಮವಾಗಿದ್ದು, ಅದನ್ನು ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಥವಾ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಅಲ್ಲದೆ, ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಗೊಂಡಲ್ಲಿ ನ್ಯಾಯಾಲಯದಲ್ಲಿ ಪಾವತಿಸಿದ ಶುಲ್ಕವನ್ನು ಅರ್ಜಿದಾರರಿಗೆ ಮರುಪಾವತಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇದರಿಂದ ಸಾರ್ವಜನಿಕರಿಗೆ ಸಮಯ ಮತ್ತು ಹಣದ ಉಳಿತಾಯವಾಗುವುದಲ್ಲದೆ, ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆಯಿಂದ ಮುಕ್ತಿ ದೊರೆಯುತ್ತದೆ. ಜೊತೆಗೆ, ಉಭಯ ಪಕ್ಷಗಳ ನಡುವೆ ಸೌಹಾರ್ದತೆ ಉಳಿಯಲು ಸಹಕಾರಿಯಾಗುತ್ತದೆ. ಜನಸಾಮಾನ್ಯರಿಗೆ ತ್ವರಿತ ಮತ್ತು ಉಚಿತ ನ್ಯಾಯ ಒದಗಿಸುವಲ್ಲಿ ಲೋಕ ಅದಾಲತ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಿರಾಗ್ ಸಿ., ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ದಂಡ ಪಾವತಿಯಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಉಪಸ್ಥಿತರಿದ್ದರು. ನ್ಯಾಯಾಲಯದ ಸಿಬ್ಬಂದಿ ಶ್ರೀಮತಿ ಲಾವಣ್ಯ ಸ್ವಾಗತಿಸಿ, ಇತರ ಸಿಬ್ಬಂದಿಗಳು ಸಹಕರಿಸಿದರು.
m

Related Posts