Featured, ಅಂಕಣ, ಲೇಖನ

ಓ ಮನುಜ ನೀ ಅರಿತುಕೋ…!

ಮಾನವೀಯತೆಯ ಮರೆತ ಮಾನವ….

ಆದನು ದಾನವ….

ಎಲವೋ ಮನುಜ,

ನರನಾಡಿಗಳಿಂದ ರಚಿತವಾಗಿದೆ ಈ ನಿನ್ನ ಶರೀರ…..

ಅದರಲ್ಲೊಂದು ತನ್ನ ಅಸ್ತಿತ್ವ ಕಳೆದುಕೊಂಡರೆ,

ಎಲ್ಲಿಹುದು ನಿನ್ನ ವೈರತ್ವ, ಅಸೂಯೆ,ಅಹಂಕಾರ….

ನನ್ನದೇ ಶ್ರೇಷ್ಠ ಎನ್ನುತ ದವಸಧಾನ್ಯವ ಉಣ್ಣುವೆ, ಕೇಳಲು ಬಾರದೆ ನಿನಗದು….

ಉಳುವ ಯೋಗಿಯು ಯಾರದು….

ಶ್ರೇಷ್ಠನೋ.?ಅಧಮನೋ.?

ತಿಳಿಯಲು ಬಯಸದೆ ನಿನ್ನಯ ಮನಸ್ಸದು….

ಪಂಜರದೊಳಗಿನ ಪಕ್ಷಿಯಾಗಿದ್ದಾಗ

ಎನ್ನುತ್ತಿದ್ದೆ ನಾ ಭಾರತೀಯ….

ಹೇಳತೊಡಗಿದೆ ನಾ ಹಿಂದೂ, ನಾ ಮುಸಲ್ಮಾನ ಪಂಜರವಾದಾಗ ಪರಕಾಯ….

ಧರ್ಮದ ಆಧಾರದಿ ಸೂರ್ಯನು ಬೆಳಕನು ನೀಡುತ್ತಿರುವನೇ..??

ಮತವು ಸಾರಭೂತವಾಗದೆ ಇದ್ದರೆ ಗಂಗೆಯೂ ವರಿಸದಿರುವಳೇ..??

ಪಂಗಡವೇ ಪಗಡಿ ಎಂದು ಹೇಳುತ ವಾಯು ಶ್ವಾಸ ನೀಡುವುದೇ..??

ಪಂಥವ ಪ್ರಮುಖವೆನ್ನದಿರಲು ಪ್ರಕೃತಿಯು ನಿನ್ನ ಬೇಡವೆಂದಿತೇ..??

ಹಿಂಸೆಯೂ ಧಕ್ಕೆಯಾಗಿದೆ ಧಾರ್ಮಿಕತೆಗೆ…..

ಹಿಂಸೆಯ ಮಾರ್ಗದಿ ಸಾಗುತಲಿ, ಧರ್ಮದ ರಕ್ಷಣೆ ಎನ್ನುತಲಿ…..

ಧ್ಯೇಯ ವಾಕ್ಯವ ಮೊಳಗಿಸುತ,

ರಕ್ತದ ಓಕುಳಿಯ ಹರಡುತಲಿ….

ನೀ ಕೇಳಿಕೋ ನಿನ್ನ ಆತ್ಮಸಾಕ್ಷಿಯೊಂದಿಗೆ,

ಪಾಲಿಸುತ್ತಿರುವುದು ಧರ್ಮವೋ.? ಅಧರ್ಮವೋ..??

ಜಗತ್ತಿನ ಅಧಿಪತಿಯೊಬ್ಬನೇ ಆ ನನ್ನ ಜಾದೂಗಾರನು, ಈಶ್ವರ್ – ಅಲ್ಲಾಹ್ – ಯೇಸು ಎಂದು ಕರೆಯಲ್ಪಪಡುವನು….

ಮಾಯಾಗಾರನ ಮಾಯಾ ಛಾಯೆಯೂ ಎಲ್ಲೆಲ್ಲೂ ಆವರಿಸಿದೆ,

ಇದನ್ನು ಬೇಧಿಸಬೇಕಾದರೆ…..

ಬಯಸಬೇಕು ಪರರ ಒಳಿತು,

ಬಾಳಬೇಕು ಆಧ್ಯಾತ್ಮಿಕತೆಯ ಕಲಿತು…..

ಸತ್ಕರ್ಮವ ಮಾಡುತ ಜನರ ಪ್ರೀತಿಯ ಗಳಿಸಿಕೋ, ಉತ್ತಮ ಗುಣ ನಡತೆಯ ಬೆಳೆಸಿಕೋ…..

ಇದರಲ್ಲಿ ಅಡಗಿದೆ ಇಹಪರ ವಿಜಯ,

ಓ ಮನುಜ ನೀ ಅರಿತುಕೋ…!

✍️ ಮಹಮ್ಮದ್ ರಾಝಿಕ್ ಮಾಲಾಡಿ

m

Related Posts