ಬದುಕೆಂಬ ಪಲ್ಲಕ್ಕಿಯಲಿ ಒಬ್ಬಂಟಿಗ ನಾನಿಲ್ಲಿ
ಹಾಯುತಿಹೆನು ಅಂತರಾಳದ ಆಂಕ್ರಂದನದ ಅನುಭೂತಿಯಲಿ
ಬರಡಾಗಿರುವ ಬಯಲು ಪ್ರದೇಶವ ಬಿಟ್ಟು,
ವಿಶಾಲವಾದ ಮರುಭೂಮಿಯ ಸಂಚಾರಿಯಾದೆ…..
ವಿಸ್ಕೃತವಾದ ಗಗನದಿ ದಿಟ್ಟಿಸಿ ನೋಡುತ್ತಿದ್ದ ನೇಸರನು
ಪಿಸುನಕ್ಕು, ನಾನಿರುವ ಏಕಾಂತದಿ ನೀನಾದೆ ಏಕಾಂಗಿ ಎಂದಂತಿದೆ ಪದೇ ಪದೇ….
ನನ್ನ ಪಾದಕ್ಕೆ ಅಂಟುತ್ತಿರುವ ಮರಳಿನ ಕಣಗಳು ಕಾವುತ್ತಿರುವಾಗ….
ನಂಬಿಕೆಯ ನಂಬುಗೆಗೆ ಬಲಿಯಾದ ನೋವು ಮನವನು ದಣಿಸುತ್ತಿದೆ…..
ಅಯ್ಯೋ ಚೇಳು! ಎಂದು ಗಾಬರಿಗೊಂಡ ಕ್ಷಣದಿ
ಟೀಕೆ-ವಿಮರ್ಶೆಗಳ ವೇದನೆಯ ಮುಂದೆ ಇದರ ಕಡಿತವು ಎಷ್ಟೋ ವಾಸಿಎಂದೆನಿಸಿದೆ…..
ಕೊಂಬಿನ ಹೈಂಸಾರನ ಜೋಕೆಯ ಸದ್ದು ನನ್ನೆರಡು ಶ್ರವಣೇಂದ್ರಿಯವನು ಅಪ್ಪಲಿಸಿದಾಕ್ಷಣ ಬೆರಗಾದ ನಿಮಿಷದಿ
ನನ್ನವರು ಎಂದವರು ಇರಿದ ಚೂರಿಯ ತಿಳಿವು ಕೂಡ ತಿಳಿಯದಂತಿದ್ದಾಗ
ಇದು ಎನಗೆ ಸುಳಿವಾದರು ನೀಡುತ್ತಿದೆ ಎಂದು ಮನವು ಹೇಳುತ್ತಿದೆ….
ಜೊತೆಗಾರನಿಲ್ಲದ ಪಯಣದಲಿ ನನ್ನವರ ಹುಡುಕಾಟದಲಿ
ಒಬ್ಬಂಟಿಗನಾಗಿ ಸಾಗುತ್ತಿರುವೆ
ಎತ್ತ ನೋಡಿದರು ಒಂದೇ ಚಿತ್ತ
ನನ್ನ ದಾರಿಯದು ಸರಿಯೋ.? ತಪ್ಪೋ.? ತಿಳಿಯದಾಗಿಹೆ….
ಎಲ್ಲಿ ಸಿಗುವರು ಯಾವ ದಿಕ್ಕಿನಲ್ಲಿರುವರವರು
ಎಂಬ ಅರಿವು ಇರದೇ ಇರುವಾಗ
ನಾನು ನಡೆಯುತ್ತಿರುವ ದಾರಿ, ಅದುವೇ ಸರಿ ಹಾದಿ….
ಯಾಂತ್ರಿಕ ಲೋಕದ ಯಾಚನೆಯಲಿ
ಇರಲಾರೇನು ನಾನಿಲ್ಲಿ
ಸುಯೋಗದ ದಾಹದಿ ಮುನ್ನಡೆಯುತಲಿ
ಗುರಿಯಿಲ್ಲದ ಪಯಣದ ಪ್ರಯಾಣಿಕನಾಗಿ
ಇರುವೆ ನಾನು ಏಕಾಂತವಾಸಿಯಾಗಿ
ಮರಳುಗಾಡಿನ ಗುಡಿಯಲ್ಲಿ…..
✍🏻 ಮಹಮ್ಮದ್ ರಾಝಿಕ್ ಮಾಲಾಡಿ




m
