Featured, ಅಂಕಣ, ಲೇಖನ

ಏಷ್ಯಾದ ಅತೀದೊಡ್ಡ ಇಸ್ಲಾಮಿಕ್ ಕಲೋತ್ಸವ ಸಾಹಿತ್ಯೋತ್ಸವಕ್ಕೆ ದಿನಗಣನೆ

ಎಸ್ಸೆಸ್ಸೆಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಏಷ್ಯಾದ ಅತೀದೊಡ್ಡ ಇಸ್ಲಾಮಿಕ್ ಕಲೋತ್ಸವವಾದ ಸಾಹಿತ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಕೇರಳ ರಾಜ್ಯದಲ್ಲಿ ಈಗಾಗಲೇ ಆರಂಭಗೊಂಡಿದ್ದು, ಕರ್ನಾಟಕದಲ್ಲಿ 13 ನೇ ಆವೃತ್ತಿಯ ಸಾಹಿತ್ಯೋತ್ಸವವು ಮುಂದಿನ ಆಗಸ್ಟ್ ತಿಂಗಳಿನಿಂದ ಯುನಿಟ್ ಮಟ್ಟದಿಂದ ಆರಂಭಗೊಳ್ಳಲಿದೆ.

ದೀರ್ಘ ಮೂರು ತಿಂಗಳುಗಳ ಕಾಲ ಮುಂದುವರೆಯುವ ಸಾಹಿತ್ಯೋತ್ಸವವು ಯುನಿಟ್ ಮಟ್ಟದಿಂದ ಆರಂಭಗೊಂಡು ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ ಮಟ್ಟ ಹೀಗೇ ಮುಂದುವರೆದು ಕೊನೆಗೆ ದೇಶದ ಸುಮಾರು 25 ರಾಜ್ಯಗಳ ಸ್ಪರ್ಧಾರ್ಥಿಗಳ ಸಾಹಿತ್ಯ ಕಲೆಗಳ ಸೆಣೆಸಾಟದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಸಮಾಪ್ತಿಗೊಳ್ಳಲಿದೆ.

ಕರ್ನಾಟಕದಲ್ಲಿ ಸಾಹಿತ್ಯೋತ್ಸವದ ಹಿನ್ನೆಲೆ:

ಸಾಹಿತ್ಯೋತ್ಸವದ ತವರೂರು ಕೇರಳವಾಗಿದೆ. 1993 ರಲ್ಲಿ ಕೇರಳದಲ್ಲಿ ಆರಂಭಗೊಂಡ ಸಾಹಿತ್ಯೋತ್ಸವಕ್ಕೆ ಮೂರು ದಶಕಗಳ ಇತಿಹಾಸವಿದೆ. ಕರುನಾಡಿನಲ್ಲಿ 2003 ರಲ್ಲಿ ‘ಸಾಹಿತ್ಯ ಸಂಗಮ’ ಎಂಬ ಹೆಸರಿನೊಂದಿಗೆ ಆರಂಭಗೊಂಡು ಕೆಲವರ್ಷಗಳ ಬಳಿಕ ‘ಪ್ರತಿಭೋತ್ಸವ’ ಎಂಬ ಹೆಸರಿನಿಂದ ಮರುನಾಮಕರಣಗೊಂಡಿತು. ವರ್ಷಂಪ್ರತಿ ನಡೆಯುತ್ತಿದ್ದ ಪ್ರತಿಭೋತ್ಸವವನ್ನು ಕಾರಣಾಂತರಗಳಿಂದ ಎರಡು ವರ್ಷಗಳಿಗೊಮ್ಮೆ ನಡೆಸಲಾಯಿತು. ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿದ್ದ ಈ ಸಾಹಿತ್ಯ ಕಲರವವು ರಾಜ್ಯಮಟ್ಟದಲ್ಲಿ ಸಮಾಪ್ತಿಗೊಳ್ಳುತ್ತಿದ್ದು, ಇದೀಗ ಕೆಲವರ್ಷಗಳಿಂದ ದೇಶದ ಸುಮಾರು 25 ರಾಜ್ಯಗಳಲ್ಲಿ ನಡೆಯುವುದರಿಂದ ಎಲ್ಲಾ ರಾಜ್ಯಗಳಲ್ಲಿಯೂ ‘ಸಾಹಿತ್ಯೋತ್ಸವ’ ಎಂಬ ಹೆಸರಿನಿಂದ ರಾಷ್ಟ್ರ ಮಟ್ಟದವರೆಗೆ ನಡೆಯುತ್ತಾ ಇದೆ.

ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಮಾಡುವುದು ಮಾತ್ರವಲ್ಲದೆ ಆನ್ ಲೈನ್ ಮೂಲಕ ಸ್ಪರ್ಧೆ ನಡೆಸಿ ವಿದ್ಯಾರ್ಥಿನಿಗಳಿಗೂ ತಮ್ಮ ಪ್ರತಿಭೆಗಳನ್ನು ಹೊರಗೆಡವಲು ಅವಕಾಶ ಕಲ್ಪಿಸಲಾಗಿದೆ. ಬಲಿಷ್ಟ ಕೇರಳ, ಜಮ್ಮು ಕಾಶ್ಮೀರ ಮುಂತಾದ ಸುಮಾರು ಇಪ್ಪತೈದರಷ್ಟು ರಾಜ್ಯಗಳೊಂದಿಗೆ ಸೆಣೆಸಾಡಿದ ನಮ್ಮೀ ರಾಜ್ಯವು ಕಳೆದ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಮರೆಯಲಾಗದು. ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿಕೊಡಲು ಕನ್ನಡ ಮಣ್ಣಿನ ಕಣ್ಮಣಿಗಳು ತಯಾರಾಗಿ ನಿಂತಿದ್ದಾರೆ. ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿರುವವರಿಗೂ ಕೆಸಿಎಫ್ ವತಿಯಿಂದ ಕನ್ನಡಿಗರಿಗೆ ಹಾಗೂ ಅರ್ ಎಸ್ ಸಿ ವತಿಯಿಂದ ಕೇರಳಿಗರಿಗೆ ವರ್ಷಂಪ್ರತಿ ಸಾಹಿತ್ಯೋತ್ಸವ ನಡೆಯುತ್ತಾ ಬಂದಿವೆ.

ದೇಶದ ವಿವಿಧ ರಾಜ್ಯಗಳ, ವಿವಿಧ ಜಿಲ್ಲೆಗಳ, ವಿವಿಧ ಊರಿನ ಪ್ರತಿಭೆಗಳಿಗೆ ಅವಕಾಶ ಸಿಗದೆ, ವೇದಿಕೆ ಸಿಗದೆ ತಮ್ಮ ಪ್ರತಿಭೆಯನ್ನು ಹೊರಗೆಡವಲಾಗದೆ ಮುದುಡಿ ಹೋಗುತ್ತಿದ್ದ ಪ್ರತಿಭೆಗೆ ಹೊಸ ರೂಪುರೇಷೆ ನೀಡಿ ವರ್ಷಂಪ್ರತಿ ಹಲವಾರು ಭಾಷಣಗಾರರನ್ನು, ಹಾಡುಗಾರರನ್ನು, ಬರಹಗಾರರನ್ನು ಈ ಲೋಕಕ್ಕೆ ಪರಿಚಯಿಸುತ್ತಿರುವ ಎಸ್ಸೆಸ್ಸೆಫ್ ಸಾಹಿತ್ಯೋತ್ಸವವು ವಿದ್ಯಾರ್ಥಿಗಳ ಪಾಲಿಗೆ ವರದಾನವೇ ಸರಿ.

ಬರಹ:-ಬಿ.ಕೆ.ಸ್ವಾದಿಕ್ ಅಲಿ ಸಂಪ್ಯ

m

Related Posts