ಪ್ರಾದೇಶಿಕವಾಗಿ ಕರ್ನಾಟಕದ ಪುಟ್ಟ ಜಿಲ್ಲೆಯಾದರೂ ಇತಿಹಾಸ, ನೈಸರ್ಗಿಕ ಸೌಂದರ್ಯ, ಸಂಪ್ರದಾಯಗಳಲ್ಲಿ ಕೊಡಗು ಜಗತ್ತಿನಲ್ಲೇ ದೊಡ್ಡ ಹಿರಿಮೆಯನ್ನು ಗುರುತಿಸಿಕೊಂಡಿದೆ. ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಲ್ಲಾ ಕೀರ್ತಿಯ ನಾಮಗಳಿರುವ ಕೊಡಗು ಅಥವಾ ಕೂರ್ಗ್ ಪ್ರಾದೇಶಿಕವಾಗಿ ಚಿಕ್ಕದಾದರೂ ಇತರ ದೊಡ್ಡ ಜಿಲ್ಲೆ,ರಾಜ್ಯಗಳಿಗಿಂತ ಹಲವಾರು ಪ್ರೇಕ್ಷಣೀಯ ಸ್ಥಳಗಳು, ಸುಂದರವಾದ ಜಲಪಾತಗಳು, ಜಲಾಶಯ, ಅಣೆಕಟ್ಟುಗಳು, ಚಹಾ ಮತ್ತು ಕಾಫಿ ಎಸ್ಟೇಟ್‌ಗಳು, ವನ್ಯಜೀವಿಗಳು, ಪರ್ವತ ಶ್ರೇಣಿಗಳು ಮತ್ತು ಎಮ್ಮೆಮಾಡು ತಲಕಾವೇರಿ, ಗೋಲ್ಡನ್ ಟೆಂಪಲ್ ನಂತಹ ಸಾಕಷ್ಟು ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಸುಂದರವಾದ ಗಿರಿ ಶಿಖರಗಳ ಸೈಟ್ ದೃಶ್ಯಗಳನ್ನು ಕಾಣಬಹುದು.
ಆದುದರಿಂದಲೇ ಜಿಲ್ಲೆಗೆ ಹರಿದು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೂರ್ಗ್ ಒಂದು ಟೂರಿಸ್ಟ್ ಡೆಸ್ಟಿನೇಷನ್ ಆದುದರಿಂದಲೇ ದೇಶ ವಿದೇಶಗಳಿಂದ, ಗಡಿನಾಡ ಜಿಲ್ಲೆ ರಾಜ್ಯಗಳಿಗಿಂದ, ಯುವಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮೋಜಿಗಾಗಿ, ಶೈಕ್ಷಣಿಕ ಪ್ರವಾಸಕ್ಕಾಗಿ ಆರಿಸುವ ಮುಖ್ಯ ತಾಣ ನಮ್ಮ ಕೊಡಗು. ದೇಶದಲ್ಲೇ ಅತೀ ಶುದ್ಧ ಆಮ್ಲಜನಕ ಪೂರೈಸುವ ನಗರ, ರಾಷ್ಟ್ರದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಗರಿಮೆ ಕೊಡಗಿನ ಕೇಂದ್ರವಾದ ಮಡಿಕೇರಿ ನಗರಕ್ಕಿದೆ.
ಈ ಎಲ್ಲಾ ಕೀರ್ತಿಯ ನಡುವೆ ಕೆಲವೊಂದು ಕೊರತೆಗಳು ಕೊಡಗಿನ ಪ್ರಾವಾಸೋಧ್ಯಮ ಎದುರುಸುತ್ತಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳು ಹೊಂಡಗಳಿಂದ ತುಂಬಿವೆ. ರಸ್ತೆ, ವಿದ್ಯುತ್ ಸಂಪರ್ಕದ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ಸೌಕರ್ಯ ಇತ್ಯಾದಿಗಳು ಮೂಲಭೂತವಾಗಿ ಜಿಲ್ಲೆಯ ಹಲವೆಡೆ ಬಲುದೊಡ್ಡ ಬೇಡಿಕೆಯಾಗಿದೆ.
ಸಾರಿಗೆ ಸೌಲಭ್ಯ:
ಪ್ರವಾಸಿ ತಾಣಗಳಿರುವ ಪ್ರದೇಶಗಳಿಗೆ. ಐತಿಹಾಸಿಕ ಸ್ಮಾರಕಗಳಿಗೆ ಇತರ ಪಾರಂಪರಿಕ ಪ್ರವಾಸಿ ತಾಣಗಳಿಗೆ ಸರ್ಕಾರ ಅಥವಾ ಪ್ರವಾಸೋದ್ಯಮ ಇಲಾಖೆ ನಿರ್ದಿಷ್ಟ ಪ್ರಯಾಣ ಶುಲ್ಕ ವಿಧಿಸಿ ಪ್ರತ್ಯೇಕ ಬಸ್ ವ್ಯವಸ್ಥೆ ಅಥವಾ ಇತರ ಅಗತ್ಯ ವಾಹನ ಸೌಕರ್ಯ ಕಲ್ಪಿಸಿದರೆ ಜನ ಸಾಮಾನ್ಯರಾದ ಪ್ರವಾಸಿಗರಿಗೆ ಪ್ರಯೋಜನಕಾರಿಯಾಗುತ್ತದೆ.
ಮಾಹಿತಿ & ಜಾಗೃತಿ ಕೇಂದ್ರ:
ಹೊರ ಜಿಲ್ಲೆಗಳಿಂದ, ಇತರ ರಾಜ್ಯಗಳಿಂದ, ವಿದೇಶಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವ ಸಂದರ್ಶಕರನ್ನು, ಪ್ರವಾಸಿಗರನ್ನು ಅತಿಥಿಗಳಂತೆ ಭರಮಾಡಿ ಗಡಿಪ್ರದೇಶಗಳಲ್ಲಿ ಅವರಿಗೆ ಬೇಕಾದ ಜಿಲ್ಲೆಯ ಕ್ಲಿಪ್ತ ಮಾಹಿತಿ, ಜಿಲ್ಲೆಯ ರಸ್ತೆಗಳಲ್ಲಿರುವ ಅಪಾಯ ವಲಯಗಳ ಕುರಿತು ಜಾಗೃತಿ, ಅರಣ್ಯ ವಲಯಗಳ, ವನ್ಯ ಜೀವಿಗಳ ಕುರಿತಿರುವ ಜಾಗೃತಿ ನೀಡುವ ಕೇಂದ್ರಗಳ ಸ್ಥಾಪನೆಯಾದರೆ ಅದು ಪ್ರವಾಸಿಗರನ್ನು ರಸ್ತೆ ಅಪಘಾತಗಳಿಂದಲೂ, ಪ್ರಾಣಪಾಯಗಳಿಂದಲೂ ಸಂರಕ್ಷಣೆ ಮಾಡಲು ಸಹಕಾರಿಯಾಗುತ್ತದೆ.
ಪ್ಲಾಸ್ಟಿಕ್ ಮುಕ್ತ ಕೊಡಗು:
ಜಿಲ್ಲೆ ನೈಸರ್ಗಿಕವಾಗಿ ಅಚ್ಚ ಹಸಿರಿನಿಂದ ಕಂಗೊಳುಸುತ್ತಿದ್ದರೂ ಜಿಲ್ಲೆಯ ಹೆದ್ದಾರಿಗಳ ಇಕ್ಕಲೆಗಳಲ್ಲಿ, ಪಟ್ಟಣಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಮಿನರಲ್ ವಾಟರ್ ಬಾಟಲಿಗಳು ಮಲಿನ ಮಾಡುತ್ತಲಿದೆ. ಮಿಠಾಯಿ ಪೊಟ್ಟಣಗಳು ಪ್ಲಾಸ್ಟಿಕ್ ತ್ಯಾಜ್ಯಗಳಾಗಿ ಅಲ್ಲಲ್ಲಿ ತುಂಬಿ ತುಳುಕುತ್ತಿವೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಪ್ರವಾಸೋದ್ಯಮ ಇಲಾಖೆ ಕೈಗೊಳ್ಳಬೇಕು. ಸಿಸಿ ಕ್ಯಾಮೆರಾದಂತಹ ತಾಂತ್ರಿಕ ಯಂತ್ರಗಳನ್ನು ಬಳಸಿ ನಿಯಮಬಾಹಿರ ಕೃತ್ಯ ಎಸಗುವವರೆಗೆ ದಂಡ ವಿಧಿಸುವಂತಾಗಬೇಕು.ಹಾಗಾದರೆ ಮಾತ್ರ ಕುಕೃತ್ಯಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯ.
ಪ್ರವಾಸಿ ತಾಣಗಳ ಅಭಿವೃದ್ಧಿ:
ಜಿಲ್ಲೆಯ ವಿವಿಧ ಕಡೆಗಳಲ್ಲಿ ಹರಡಿರುವ ಪ್ರವಾಸಿ ತಾಣಗಳ ಸಮಗ್ರವಾದ ಅಭಿವೃದ್ಧಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಪಟ್ಟಣ ಪಂಚಾಯಿತಿ, ನಗರಸಭೆ, ಜಿಲ್ಲಾಡಳಿತ ವೈವಿಧ್ಯಮಯ ಯೋಜನೆಗಳನ್ನು ಹಮ್ಮಿಕೊಂಡು ನವತಲೆಮಾರನ್ನು ಆಕರ್ಷಿಸುವ ಆಧುನಿಕ ತಾಂತ್ರಿಕ ಸೌಕರ್ಯಗಳನ್ನು, ಮನರಂಜನಾ ಕೇಂದ್ರಗಳನ್ನು, ಫ್ಯಾಮಿಲಿ ಪಾರ್ಕ್ ಗಳನ್ನು, ನಿರ್ಮಾಣ ಮಾಡುವುದರ ಮೂಲಕ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ಇದೆ.
ಜಿಲ್ಲೆಗೊಂದು ಝೂ
ಕೊಡಗು ವನ್ಯ ಮೃಗಗಳ ಅವಾಸ ಕೇಂದ್ರವಾಗಿದ್ದರೂ ಕಾಡು ಪ್ರಾಣಿಗಳನ್ನು ವೀಕ್ಷಿಸಿಲು ಕೇವಲ ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನು ಅವಲಂಬಿಸುವವರು ಕರ್ನಾಟಕ ಒಳಗೊಂಡ ಇತರ ರಾಜ್ಯಗಳ ಪ್ರವಾಸಿಗರು. ಇದಕ್ಕೊಂದು ಪರಿಹಾರವೆಂಬಂತೆ ಜಿಲ್ಲೆಯಲ್ಲಿ ಸೂಕ್ತ ಅರಣ್ಯ ಪ್ರದೇಶವೊಂದನ್ನು ಆಯ್ಕೆ ಮಾಡಿ ಸಾಕು ಮತ್ತು ಕಾಡು ಪ್ರಾಣಿ, ಪಕ್ಷಿಗಳ ಚಿಕ್ಕ ಮತ್ತು ಚೊಕ್ಕದಾದ ಒಂದು ಮೃಗಾಲಯದ ಸ್ಥಾಪನೆಯೊಂದಿಗೆ ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿ ಬಲುದೊಡ್ಡ ಭರವಸೆಯಾಗಲಿದೆ.
ಸುರಕ್ಷಾ ಯೋಜನೆ:
ಮನರಂಜನೆಗೆಂದು ಬಂದು ಮರಣ ಹೊಂದಿದ ಹಲವಾರು ದಾರುಣ ಘಟನೆಗಳು ಜಿಲ್ಲೆಯ ವಿವಿಧಡೆಗಳಲ್ಲಿ ನಡೆದಿದೆ. ಕಾಡಾನೆ ಸಮೇತ ವನ್ಯಜೀವಿಗಳ ಅಕ್ರಮಣ, ನದಿ ನೀರಲ್ಲಿ ಮುಳುಗಿ ಸಾವು, ಜಲಪಾತದಿಂದ ಜಾರಿಬಿದ್ದು ದುರ್ಮರಣ ಇಂತಹ ಅಪಾಯಗಳಿಂದ ಜಿಲ್ಲೆಯವರನ್ನು ಪ್ರವಾಸಿಗರನ್ನು ಸಂರಕ್ಷಿಸಲು ಅಪಾಯಕ್ಕೆ ಸಾಧ್ಯತೆಗಳಿರುವ ಪ್ರದೇಶಗಳಲ್ಲಿ ಸೂಕ್ತ ಸುರಕ್ಷಾ ಮಾರ್ಗವನ್ನು ಸೌಲಭ್ಯಗಳನ್ನು ಅದಕ್ಕಿರುವ ಸಿಬ್ಬಂದಿಗಳನ್ನು ಏರ್ಪಾಡು ಗೊಳಿಸುವುದರಿಂದ ಪ್ರವಾಸಿಗರಿಗುಂಟಾಗಲಿರುವ ಪ್ರಾಣಪಾಯವನ್ನ ತಡೆಗಟ್ಟಬಹುದು.
ಜನ ಪ್ರತಿನಿಧಿಗಳಿಗೊಂದು ಮನವಿ
ಕೂರ್ಗ್ ಪ್ರವಾಸಿಗರಿಗೆ ಒಂದು ಸುಂದರವಾದ ಗಿರಿಧಾಮವಾಗಿದ್ದು, ಜಿಲ್ಲೆ ತನ್ನದೇ ಆದ ಪಾರಂಪರಿಕ ಐತಿಹಾಸಿಕ ಸಾಂಪ್ರದಾಯಿಕ ಹಿನ್ನೆಲೆಯನ್ನ ಹೊಂದಿದೆ ಇದನ್ನು ಕಾಪಾಡಿಕೊಂಡು ಜಿಲ್ಲೆಯ ಸಮಗ್ರ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಜಿಲ್ಲೆಯ ಕೀರ್ತಿಯನ್ನು ಬಾನತ್ತರಕೇರಿಸಲು ಅಗತ್ಯವಿರುವ ಪದ್ಧತಿಗಳನ್ನು ಯೋಜನೆಗಳನ್ನು ಹಮ್ಮಿಕೊಂಡರೆ ಪ್ರವಾಸೋದ್ಯಮದಿಂದ ಜಿಲ್ಲೆಗೆ ಅತಿದೊಡ್ಡ ಆರ್ಥಿಕ ಆದಾಯದ ಮಾರ್ಗವನ್ನು ಕಂಡುಕೊಳ್ಳಬಹುದು. ಅದಕ್ಕೆ ಬೇಕಾಗಿರುವ ಅಭಿವೃದ್ಧಿಯ ಯೋಜನೆಗಳನ್ನ ಕಾರ್ಯರೂಪಕ್ಕೆ ತರುವಲ್ಲಿ ಜಿಲ್ಲಾಡಳಿತ, ಜಿಲ್ಲೆಯ ಮಾನ್ಯ ಶಾಸಕರಗಳು, ಪ್ರವಾಸೋದ್ಯಮ ಇಲಾಖೆ ಹಾಗೂ ಜನಪ್ರತಿನಿಧಿಗಳು ನಿರೀಕ್ಷೆಯ ಭರವಸೆಯಾಗಿಲಿ ಎಂಬ ಹಾರೈಕೆ ಜನಸಾಮಾನ್ಯರದ್ದು.
ಲೇಖನ:- ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ ಕೊಡಗು +91 9845769458




m
