Featured, ಅಂಕಣ, ಲೇಖನ, ಸ್ಥಳೀಯ

ಸಂಪಾದಕೀಯ: ಸುಳ್ಳು ಸುದ್ದಿಯ ವಿಷವೃಕ್ಷ – ಮಾಧ್ಯಮಗಳ ನೈತಿಕ ಪತನ ಮತ್ತು ನ್ಯಾಯದ ಕಟುವಾದ ಪಾಠ

ಭಾರತೀಯ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳನ್ನು ಸಾಮಾಜಿಕ ದರ್ಪಣ ಎಂದು ಪರಿಗಣಿಸಲಾಗಿದೆ. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಝೀ ನ್ಯೂಸ್ ಮತ್ತು ನ್ಯೂಸ್ 18 ಇಂಡಿಯಾದಂತಹ ಪ್ರಮುಖ ವಾಹಿನಿಗಳು ನಡೆಸಿದ ಸುಳ್ಳು ಸುದ್ದಿ ಪ್ರಸಾರವು ಈ ದರ್ಪಣವೇ ಮುರಿದು ಹೋಗುವ ಸ್ಥಿತಿಗೆ ತಂದಿದೆ. ಪೂಂಚ್ ನ್ಯಾಯಾಲಯದ ತೀವ್ರ ಖಂಡನೆ ಮತ್ತು ಎಫ್ಐಆರ್ ದಾಖಲಿಸುವ ಆದೇಶವು ಕೇವಲ ಒಂದು ಪ್ರಕರಣದ ತೀರ್ಪಲ್ಲ – ಇದು ಇಂದಿನ ಸಂವೇದನಾಶೀಲ, ಸತ್ಯದಿಂದ ದೂರ ಸರಿಯುತ್ತಿರುವ ಮಾಧ್ಯಮ ವ್ಯವಸ್ಥೆಗೆ ನೀಡಲಾದ ಕಟುವಾದ ಗದರಿಕೆಯಾಗಿದೆ.

ಪಾಕಿಸ್ತಾನದ ಗಡಿದಾಳಿಯಲ್ಲಿ ನಿರಪರಾಧಿ ನಾಗರಿಕರಾಗಿ ಮರಣಹೊಂದಿದ ಶಿಕ್ಷಕ ಖಾರಿ ಇಕ್ಬಾಲ್ ಅವರನ್ನು “ಲಶ್ಕರ್-ಎ-ತೋಯಿಬಾ ಸದಸ್ಯ” ಮತ್ತು “ಪುಲ್ವಾಮಾ ದಾಳಿಯ ಸಂಬಂಧಿ” ಎಂದು ಪ್ರಸಾರ ಮಾಡಿದ್ದು, ಇಂದಿನ ಪತ್ರಿಕೋದ್ಯಮದಲ್ಲಿ ಬೇರೂರಿರುವ ದೊಡ್ಡ ವ್ಯಾಧಿಗಳನ್ನು ಬಹಿರಂಗಪಡಿಸಿದೆ. ಯಾವುದೇ ಪರಿಶೀಲನೆ ಇಲ್ಲದೆ, ಅಧಿಕೃತ ದಾಖಲೆಗಳನ್ನು ಪರಿಶೀಲಿಸದೆ, ಸುಳ್ಳನ್ನು ಸುದ್ದಿಯಾಗಿ ಮಾರಾಟ ಮಾಡುವ ಸಾಹಸ, ಸಂವೇದನಾಶೀಲತೆಯ ಹೆಸರಿನಲ್ಲಿ ಸಾಮಾನ್ಯ ನಾಗರಿಕರ ಜೀವನವನ್ನು ಚೂರುಚೂರು ಮಾಡುವ ನಿಷ್ಠುರ ಮನೋಭಾವ, ಧಾರ್ಮಿಕ ಸೌಹಾರ್ದತೆಗೆ ಹಾನಿ ಮಾಡುವ, ಸಮುದಾಯಗಳ ನಡುವೆ ಅವಿಶ್ವಾಸವನ್ನು ಬಿತ್ತುವ ಅಪರಾಧಿ ಪ್ರವೃತ್ತಿ – ಇವೆಲ್ಲವೂ ಇಂದಿನ ಮಾಧ್ಯಮಗಳ ದುರಂತದ ಮುಖಗಳು.

ನ್ಯಾಯಾಲಯವು ಸರಿಯಾಗಿಯೇ ಇದನ್ನು “ಸಾರ್ವಜನಿಕ ಶಾಂತಿಗೆ ಬೆದರಿಕೆ” ಎಂದು ಗುರುತಿಸಿದೆ. 2019ರ ಪುಲ್ವಾಮಾ ದಾಳಿಯೊಂದಿಗೆ ಸಂಬಂಧ ಕಲ್ಪಿಸುವ ಮೂಲಕ, ಈ ವಾಹಿನಿಗಳು ಕೇವಲ ಸುಳ್ಳು ಸುದ್ದಿಯನ್ನಲ್ಲ, ಒಂದು ಪೂರ್ಣ ಪ್ರಚಾರ ಪ್ರಸಾರ ಮಾಡಿವೆ. ಪೂಂಚ್ ನ್ಯಾಯಾಲಯದ ನ್ಯಾಯಾಧೀಶರು ನೀಡಿರುವ ತೀರ್ಪು ಕೇವಲ ಕಾನೂನುಬದ್ಧ ತಾಂತ್ರಿಕತೆಯಲ್ಲ – ಇದು ಸಮಾಜದ ನೈತಿಕ ಅಸ್ತಿಭಾರವನ್ನು ರಕ್ಷಿಸುವ ಘೋಷಣೆ. “ಮಾನನಷ್ಟದ ಪರಿಣಾಮಗಳು ಎಲ್ಲಿಯಾದರೂ ಸಂಭವಿಸಬಹುದು” ಎಂಬ BNSS ಸೆಕ್ಷನ್ 199ರ ವ್ಯಾಖ್ಯಾನವು ದೂರದರ್ಶಿತವಾಗಿದೆ. ದೆಹಲಿಯ ಸ್ಟುಡಿಯೋದಿಂದ ಪ್ರಸಾರವಾದರೂ, ಪೂಂಚ್ನಲ್ಲಿ ವಾಸಿಸುವ ಇಕ್ಬಾಲ್ ಅವರ ಕುಟುಂಬಕ್ಕೆ ಹಾನಿಯಾದಾಗ, ಅಲ್ಲಿ ನ್ಯಾಯ ಬೇಕು.

ಪತ್ರಿಕಾ ಸ್ವಾತಂತ್ರ್ಯದ ದುರ್ಬಳಕೆಗೆ ಇದು ಎಚ್ಚರಿಕೆಯಾಗಿದೆ. ಸಂವಿಧಾನದ 19(1)(a) ಸ್ವಾತಂತ್ರ್ಯವು 19(2)ರಡಿಯಲ್ಲಿ ಸಾರ್ವಜನಿಕ ಸುರಕ್ಷೆ, ನೀತಿಗೆ ಒಳಪಟ್ಟಿದೆ. “ವರದಿಗಾರಿಕೆ” ಎಂಬ ಹೆಮರಿನಲ್ಲಿ ಸುಳ್ಳು ಹರಡುವುದು ಸ್ವಾತಂತ್ರ್ಯವಲ್ಲ – ಅದು ಸಾಮಾಜಿಕ ಅಪರಾಧ. IT Act 2000 ಮತ್ತು BNSSನ ಸೆಕ್ಷನ್ 353, 356, 196ರಡಿಯಲ್ಲಿ ಶಿಕ್ಷೆಯನ್ನು ನೆನಪಿಸಿ, ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ – “ಮಾಧ್ಯಮಗಳು ನಿಯಮಗಳಿಲ್ಲದ ಶಕ್ತಿಯಾಗಬಾರದು.”

ಮಾಧ್ಯಮಗಳ ದ್ವಿಮುಖ ನೀತಿಯೂ ಇಲ್ಲಿ ಬಹಿರಂಗವಾಗಿದೆ. ಈ ವಾಹಿನಿಗಳು ನಂತರ “ತಪ್ಪಾಗಿ ಅರ್ಥೈಸಿಕೊಂಡಿದೆ” ಎಂದು ಹೇಳಿಕೆ ನೀಡಿದರೂ, ಅದು ಸಾಕಾಗುವುದಿಲ್ಲ. ಸಂವೇದನಾಶೀಲ ಸುದ್ದಿಯನ್ನು ಬಿಸಿಯಾಗಿ ಪ್ರಸಾರ ಮಾಡಿ, ವಿರೋಧ ಬಂದಾಗ ಹಿಂತೆಗೆದುಕೊಳ್ಳುವಿಕೆ, ಕ್ಷಮೆ ಯಾಚಿಸಿ ಮುಕ್ತಿ ಪಡೆಯುವ ಈ ಸುತ್ತಿಗೆ ನೀತಿಯನ್ನು ನ್ಯಾಯಾಲಯವು ತೀವ್ರವಾಗಿ ತಿರಸ್ಕರಿಸಿದೆ. ಸುಳ್ಳು ಸುದ್ದಿಯಿಂದ ಉಂಟಾದ ಸಾಮಾಜಿಕ ಹಾನಿಯನ್ನು “ಸಾರಿ” ಎಂದು ಮಾತ್ರದಿಂದ ಮರೆಮಾಚಲಾಗುವುದಿಲ್ಲ.

ಪತ್ರಿಕಾ ಸ್ವಯಂ ನಿಯಂತ್ರಣ ವ್ಯವಸ್ಥೆ ವಿಫಲವಾಗಿದೆಯೇ? NBA (News Broadcasters Association) ಮತ್ತು PCI (Press Council of India) ಈ ರೀತಿಯ ದುರುಪಯೋಗಗಳನ್ನು ತಡೆಯಲು ಏಕಿಲ್ಲ? ರೇಟಿಂಗ್‌ಗಳಿಗಾಗಿ ನೀತಿ-ನಿಯಮಗಳನ್ನು ತ್ಯಾಗ ಮಾಡುವ ಮಾಧ್ಯಮಗಳು ಹೇಗೆ “ರಾಷ್ಟ್ರೀಯ” ಎನಿಸಿಕೊಳ್ಳುತ್ತವೆ? ಸರ್ಕಾರದ ನಿಯಂತ್ರಣವು ಪರಿಹಾರವೇ? TRAI ಮತ್ತು I&B ಸಚಿವಾಲಯವು ಹೆಚ್ಚು ಕಟ್ಟುನಿಟ್ಟಾದ ನಿಯಮಗಳನ್ನು ತರಬೇಕೇ? ಎಂಬ ಪ್ರಶ್ನೆಗಳು ಇಲ್ಲಿ ಉದ್ಭವಿಸಿವೆ.

ಪೂಂಚ್ ನ್ಯಾಯಾಲಯದ ಈ ತೀರ್ಪು ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಮಾಧ್ಯಮಗಳು ತಮ್ಮ “ಸ್ವಾತಂತ್ರ್ಯ”ವನ್ನು ಸಾಮಾನ್ಯರ ಗೌರವದ ಮೇಲೆ ಕೊಚ್ಚಿಕೊಂಡು ಹೋಗಲು ಬಿಡಬಾರದು. ಸುಳ್ಳು ಸುದ್ದಿ ಪ್ರಸಾರವು ಕೇವಲ ನೈತಿಕ ತಪ್ಪಲ್ಲ – ಅದು ಶಿಕ್ಷಾರ್ಹ ಅಪರಾಧ. ಇಕ್ಬಾಲ್ ಅವರ ಕುಟುಂಬಕ್ಕೆ ನಷ್ಟಪರಿಹಾರ ಮತ್ತು ಸಾರ್ವಜನಿಕ ಕ್ಷಮೆಯಾಚನೆ ಕಡ್ಡಾಯವಾಗಬೇಕು.

ಇಂದಿನ ಪತ್ರಿಕೋದ್ಯಮದಲ್ಲಿ “ಪ್ರಥಮ” ಪುಟದ ಸುದ್ದಿ, “ಟಿಆರ್‌ಪಿ” ರೇಟಿಂಗ್‌ಗಳು ಮುಖ್ಯವಾಗಿದೆ. ಆದರೆ, ಈ ಪ್ರಕರಣವು ನಿಯಂತ್ರಣವಿಲ್ಲದೆ ತಮ್ಮ ತೇವಳಿಗೆ ಬೇಕಾದ ರೀತಿಯಲ್ಲಿ ವರ್ತಿಸುವ ಮಾಧ್ಯಮಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ.

ರಶೀದ್ ಜಟ್ಟಿಪಳ್ಳ, ಇ-ವಾರ್ತೆ ಕನ್ನಡ ಡಿಜಿಟಲ್ ಮೀಡಿಯಾ

m

Related Posts