Featured, ಅಂಕಣ, ಸ್ಥಳೀಯ

ಜೀವನದಲ್ಲಿ ಶಿಕ್ಷಕರ ಪಾತ್ರ

ಮಾನವನ ಜೀವನವನ್ನು ರೂಪಿಸುವಲ್ಲಿ ತಾಯಿ–ತಂದೆಯ ನಂತರ ಅತ್ಯಂತ ಮುಖ್ಯ ಪಾತ್ರ ವಹಿಸುವವರು ಶಿಕ್ಷಕರು. ಅವರು ಕೇವಲ ಅಕ್ಷರಜ್ಞಾನವನ್ನು ನೀಡುವವರಲ್ಲ; ಬದಲಾಗಿ ಮನುಷ್ಯನ ವ್ಯಕ್ತಿತ್ವವನ್ನು ಕಟ್ಟುವ ಶಿಲ್ಪಿಗಳೂ ಹೌದು. “ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ” ಎಂದು ನಮ್ಮ ಸಂಸ್ಕೃತಿಯಲ್ಲಿ ಹೇಳಿರುವುದು, ಶಿಕ್ಷಕರ ಸ್ಥಾನವನ್ನು ಎಷ್ಟು ಎತ್ತರದಲ್ಲಿ ನೋಡಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.ಶಿಕ್ಷಕರು ವಿದ್ಯೆಯ ದೀಪವನ್ನು ಬೆಳಗಿಸಿ, ಅಜ್ಞಾನದ ಕತ್ತಲೆಯನ್ನೆಲ್ಲ ದೂರ ಮಾಡುತ್ತಾರೆ. ಪುಸ್ತಕದಲ್ಲಿರುವ ಅಕ್ಷರಗಳನ್ನು ಓದಲು ಮಾತ್ರವಲ್ಲ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುವವರು ಶಿಕ್ಷಕರು. ವಿಜ್ಞಾನ, ಕಲೆ, ಗಣಿತ, ಸಾಹಿತ್ಯ – ಯಾವ ವಿಷಯವಾಗಿರಲಿ, ಅದರ ಮರ್ಮವನ್ನು ತಿಳಿಸುತ್ತಾರೆ.

      ಮನುಷ್ಯನಲ್ಲಿ ಜ್ಞಾನವಷ್ಟೇ ಸಾಕಾಗುವುದಿಲ್ಲ, ಮನುಷ್ಯನಲ್ಲಿ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಮಾನವೀಯತೆ ಇರಬೇಕು. ಇವುಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೆಳೆಸುವವರು ಶಿಕ್ಷಕರು. ಅವರ ಮಾತು, ನಡೆ, ಶಿಸ್ತು ಹಾಗೂ ಜೀವನಶೈಲಿ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತದೆ. ಒಳ್ಳೆಯ ಶಿಕ್ಷಕರ ಸಹವಾಸದಲ್ಲಿ ವಿದ್ಯಾರ್ಥಿ ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ.

ವಿದ್ಯಾರ್ಥಿ ಜೀವನದಲ್ಲಿ ಹಲವು ಅಡೆತಡೆಗಳು ಎದುರಾಗುತ್ತವೆ. ಅಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುವ ಸಂಭವವೂ ಇರುತ್ತದೆ. ಆದರೆ ಒಬ್ಬ ಒಳ್ಳೆಯ ಶಿಕ್ಷಕರು ವಿದ್ಯಾರ್ಥಿಯನ್ನು ಪ್ರೇರೇಪಿಸಿ, ಆತ್ಮವಿಶ್ವಾಸ ತುಂಬಿ, ಯಶಸ್ಸಿನ ದಾರಿಯತ್ತ ನಡೆಸುತ್ತಾರೆ. ಕೆಲವೊಮ್ಮೆ ಶಿಕ್ಷಕರೊಂದು ಸಣ್ಣ ಮಾತೇ ವಿದ್ಯಾರ್ಥಿಯ ಬದುಕನ್ನು ಬದಲಾಯಿಸಬಲ್ಲದು.

ಒಬ್ಬ ವಿದ್ಯಾರ್ಥಿ ಮುಂದಿನ ದಿನಗಳಲ್ಲಿ ವೈದ್ಯ, ಇಂಜಿನಿಯರ್, ಕವಿ, ವಿಜ್ಞಾನಿ ಅಥವಾ ನಾಯಕನಾಗಿರಬಹುದು. ಅವನ ಆಧಾರವಾಗಿರುವುದು ಶಿಕ್ಷಕರ ಪಾಠಗಳು. 

 ಶಿಕ್ಷಕರು ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲ, ಒಂದು ಸಮಾಜವನ್ನೇ ಕಟ್ಟುವವರಾಗಿದ್ದಾರೆ. ಸಮಾಜದ ಸುಧಾರಣೆಯ ಬೆನ್ನಹತ್ತಿರುವ ಶಕ್ತಿ ಶಿಕ್ಷಕರೇ ಆಗಿದ್ದಾರೆ.

ಪ್ರಸ್ತುತ ಯುಗದಲ್ಲಿ ವಿಜ್ಞಾನ–ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ವೇಳೆ ವಿದ್ಯಾರ್ಥಿಗಳು ಅನೇಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಸ್ಪರ್ಧೆ, ನಿರುದ್ಯೋಗ, ದುರಾಸೆ ಇತ್ಯಾದಿಗಳ ನಡುವೆ ವಿದ್ಯಾರ್ಥಿಗಳನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಶಿಕ್ಷಕರ ಪ್ರಮುಖ ಕರ್ತವ್ಯವಾಗಿದೆ. ಅವರು ಕೇವಲ ಪಾಠ ಕಲಿಸುವುದಲ್ಲ, ವಿದ್ಯಾರ್ಥಿಗಳ ಮನೋಭಾವನೆ, ಕೌಶಲ್ಯ ಮತ್ತು ಮಾನವೀಯ ಗುಣಗಳನ್ನು ಬೆಳೆಸಬೇಕು.

ಶಿಕ್ಷಕರು ನಮ್ಮ ಬದುಕಿನ ದಾರಿದೀಪಗಳಾಗಿದ್ದಾರೆ. ಅವರು ನೀಡುವ ಜ್ಞಾನ, ಸಂಸ್ಕಾರ ಮತ್ತು ಮೌಲ್ಯಗಳ ಬೆಳಕಿನಲ್ಲಿ ವಿದ್ಯಾರ್ಥಿಯು ಯಶಸ್ಸಿನ ಗುರಿಯನ್ನು ತಲುಪಲು ಸಹಾಯಕವಾಗುತ್ತದೆ.ತಾಯಿ–ತಂದೆಯರ ನಂತರ ಬದುಕಿನಲ್ಲಿ ಅತ್ಯಂತ ಗೌರವಕ್ಕೊಳಗಾಗಬೇಕಾದವರು ಶಿಕ್ಷಕರು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವೆಂದರೆ, ಶಿಕ್ಷಕರನ್ನು ಗೌರವಿಸಿ, ಅವರ ಉಪದೇಶಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಸಮಾಜಕ್ಕೆ ಒಳ್ಳೆಯ ನಾಗರಿಕನಾಗಿ ಬೆಳೆಯುವುದು.

ಎಲ್ಲಾ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆ ಶುಭಾಶಯಗಳು 

ಬರಹ: ಆಶಿಕ್ ಕೊಡಗು 

m

Related Posts