ಕೊಚ್ಚಿ: ನೆಡುಂಬಸ್ಸೇರಿಯಲ್ಲಿ ಐಷಾರಾಮಿ ಕಾರೊಂದು ಸ್ಕೂಟರ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಳ್ಯ ನಿವಾಸಿ ನಿವಾಸಿ ಇಯಾಸ್ ಸೇರಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುಹೈಲ್ ಸೇರಿದಂತೆ ನಾಲ್ವರ ಜಾಮೀನು ಅರ್ಜಿಯನ್ನು ಅಂಗಮಾಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ಪ್ರಕರಣದ ಮೊದಲ ಆರೋಪಿ ಸುಹೇಲ್ ಸಜೀವ್ ಹಾಗೂ ಎರಡನೇ, ಮೂರನೇ ಮತ್ತು ನಾಲ್ಕನೇ ಆರೋಪಿಗಳಾದ ನಿನಾವ್, ಜೋಯಲ್ ಮತ್ತು ಅಮೀರ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ನಿರಾಕರಿಸಿದೆ. ಜಾಮೀನು ಅರ್ಜಿಗಳ ವಿಚಾರಣೆ ಶುಕ್ರವಾರ ಪೂರ್ಣಗೊಂಡಿದ್ದು, ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಲಾಗಿತ್ತು.
ಜಾಮೀನು ಅರ್ಜಿಯ ವಿಚಾರಣೆ ವೇಳೆ, ಅಪಘಾತಕ್ಕೀಡಾದ ಸ್ಕೂಟರ್ನಲ್ಲಿ ಮೂವರು ಪ್ರಯಾಣಿಸುತ್ತಿದ್ದದ್ದು ಕಾನೂನುಬಾಹಿರವಾಗಿದ್ದು, ಅದೂ ಅಪಘಾತಕ್ಕೆ ಕಾರಣವಾಗಿದೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಸ್ಕೂಟರ್ನಲ್ಲಿ ಮೂವರು ಪ್ರಯಾಣಿಸುತ್ತಿದ್ದದ್ದು ನಿಯಮ ಉಲ್ಲಂಘನೆಯಾಗಿದ್ದರೂ, ಅವರಿಗೆ ಕಾರಿನಿಂದ ಡಿಕ್ಕಿ ಹೊಡೆಯುವುದು ಸಮರ್ಥನೀಯವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ಕೂಟರ್ ಸವಾರರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ ಪ್ರಸ್ತಾಪವಾದಾಗ, ಮೂವರೂ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಮುಂದಿನ ಕ್ರಮದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ ಎನ್ನಲಾಗಿದೆ.
ಅಕ್ಟೋಬರ್ 11ರಂದು ಬೆಳಗಿನ ಜಾವ ಸುಮಾರು 1.45ರ ವೇಳೆಗೆ ನೆಡುಂಬಸ್ಸೇರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ವಯನಾಡು ಮೂಲದ ದೇವಿಕಾ, ಪಾಲಕ್ಕಾಡ್ ಮೂಲದ ಗೋಪಿಕಾ ಹಾಗೂ ಸುಳ್ಯ ಮೂಲದ ಇಯಾಸ್ ಪ್ರಯಾಣಿಸುತ್ತಿದ್ದ ಸ್ಕೂಟರ್ನ ಹಿಂಭಾಗಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರೂ ಮೃತಪಟ್ಟಿದ್ದರು.
ಕಾರು ಚಲಾಯಿಸುತ್ತಿದ್ದ ಸುಹೇಲ್ ಸಜೀವ್ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣದ ಪ್ರಾಥಮಿಕ ಎಫ್ಐಆರ್ನಲ್ಲಿ ಆರೋಪಿಯ ಹೆಸರು ಹಾಗೂ ಆತ ಮದ್ಯಪಾನ ಮಾಡಿದ್ದಾನೆಯೇ ಎಂಬ ವಿವರಗಳನ್ನು ಸ್ಪಷ್ಟವಾಗಿ ದಾಖಲಿಸದಿರುವುದು ಬಳಿಕ ವಿವಾದಕ್ಕೆ ಕಾರಣವಾಗಿತ್ತು. ಆದರೆ ರಿಮಾಂಡ್ ವರದಿಯಲ್ಲಿ ಸುಹೇಲ್ ಮದ್ಯಪಾನ ಮಾಡಿದ್ದ ಕುರಿತು ಉಲ್ಲೇಖಿಸಲಾಗಿತ್ತು.
ಇತ್ತೀಚೆಗೆ ಹೊರಬಂದ ರಕ್ತ ಪರೀಕ್ಷಾ ವರದಿಯ ಪ್ರಕಾರ, ಅಪಘಾತದ ವೇಳೆ ಸುಹೇಲ್ನ ರಕ್ತದಲ್ಲಿನ ಆಲ್ಕೋಹಾಲ್ ಪ್ರಮಾಣ ಕಾನೂನುಬದ್ಧ ಮಿತಿಗಿಂತ ಸುಮಾರು 5.3 ಪಟ್ಟು ಹೆಚ್ಚು ಇತ್ತು ಎಂದು ವರದಿಯಾಗಿದೆ. ಕಾನೂನುಬದ್ಧ ಮಿತಿ 100 ಮಿ.ಲೀ. ರಕ್ತದಲ್ಲಿ 30 ಮಿ.ಗ್ರಾಂ ಆಲ್ಕೋಹಾಲ್ ಆಗಿದ್ದು, ಇದಕ್ಕಿಂತ ಬಹಳ ಹೆಚ್ಚಿನ ಪ್ರಮಾಣ ಪತ್ತೆಯಾಗಿದೆ ಎನ್ನಲಾಗಿದೆ.
ಪ್ರಕರಣವು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಅಪಘಾತದ ಸಂದರ್ಭಗಳು ಹಾಗೂ ಆರೋಪಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.