Featured, ಇತರೆ

ಇಯಾಸ್ ಕುಟುಂಬಕ್ಕೆ ಪಿ.ವಿ. ಮೋಹನ್ ಸಾಂತ್ವನ; ಸೂಕ್ತ ಪರಿಹಾರಕ್ಕೆ ಕೇರಳ ಸಚಿವರೊಂದಿಗೆ ಮಾತುಕತೆ

ಸುಳ್ಯ: ಇತ್ತೀಚೆಗೆ ಕೇರಳದ ಕೊಚ್ಚಿ ಸಮೀಪದ ನೆಡುಂಬಸ್ಸೇರಿಯಲ್ಲಿ ಸಂಭವಿಸಿದ ಭೀಕರ ಮಿನಿ ಕೂಪರ್ ಕಾರು–ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟ ಸುಳ್ಯ ತಾಲೂಕಿನ ಕನಕಮಜಲು ಪೆಲತ್ತಡ್ಕ ನಿವಾಸಿ ಇಬ್ರಾಹಿಂ ಅವರ ಪುತ್ರ ಇಯಾಸ್ ಅವರ ಮನೆಗೆ ವಿಧಾನ ಪರಿಷತ್ ಸದಸ್ಯ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಮುಖಂಡ ಪಿ.ವಿ. ಮೋಹನ್ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಪಘಾತದಲ್ಲಿ ಕುಟುಂಬದ ಆಧಾರಸ್ತಂಭವಾಗಿದ್ದ ಪುತ್ರನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಅವರು, ಘಟನೆಯ ಕುರಿತು ಮಾಹಿತಿ ಪಡೆದು ಕುಟುಂಬದ ನೋವಿಗೆ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಹಾಗೂ ಅಪಘಾತ ಸಂಭವಿಸಿದ ಎರ್ನಾಕುಳಂ ಜಿಲ್ಲೆಯ ಉಸ್ತುವಾರಿ ಸಚಿವ ರೋಜಿ ಎಂ. ಜಾನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪಿ.ವಿ. ಮೋಹನ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಿದರು.

ಮೂವರು ಯುವಜನರ ಸಾವಿಗೆ ಕಾರಣವಾದ ಅಪಘಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಅವರು, ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ನಿಷ್ಪಕ್ಷಪಾತ ತನಿಖೆಯ ಮೂಲಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

ವಿಶೇಷವಾಗಿ, ಕುಟುಂಬದ ಆಧಾರಸ್ತಂಭವಾಗಿದ್ದ ಏಕೈಕ ಪುತ್ರನನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಇಯಾಸ್ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಿಕೊಡುವಂತೆ ಸಚಿವರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಜಿ. ಕೃಷ್ಣಪ್ಪ ರಾಮಕುಂಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಕೆ.ಎಂ. ಮುಸ್ತಫ, ಕೆಪಿಸಿಸಿ ಮಾಜಿ ಸಂಯೋಜಕ ಎಸ್. ಶಂಸುದ್ದೀನ್, ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಎಸ್. ಗಂಗಾಧರ್, ಭೂ ನ್ಯಾಯಮಂಡಳಿ ಸದಸ್ಯ ಅಡ್ವೊಕೇಟ್ ಫವಾಜ್ ಕನಕಮಜಲು, ಪಿ.ಸಿ. ಜಯರಾಂ, ಇಕ್ಬಾಲ್ ಸುಣ್ಣಮೂಲೆ ಮೊದಲಾದವರು ಉಪಸ್ಥಿತರಿದ್ದರು.

Related Posts