Featured, ಅಂಕಣ, ಲೇಖನ, ಸ್ಥಳೀಯ

ಒಂದು ಕೊಟ್ಟು ಹತ್ತು ಪಡೆದೆ

ಆತಂಕದ ಕಾರ್ಮೋಡ ಗಳ ನಡುವೆ ಒಂದು ಸಂಚಾರ 

ಕಳೆದ ಮೆ 2 ಶುಕ್ರವಾರದ ದಿನ. ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆಯಿಂದಾಗಿ ಕರಾವಳಿಯಲ್ಲಿ ತೀವ್ರ ಆತಂಕದ ಕಾರ್ಮೋಡ ಕವಿದಿತ್ತು. ಅಷ್ಟೇನೋ ಆ ವಿಚಾರ ಗಮನ ಹರಿಸದೆ ನಾನು ಹಾವೇರಿಯ ಸವಣೂರಿನಿಂದ ಮಂಗಳೂರಿನ ಕಡೆಗೆ ಬೆಳಿಗ್ಗೆ ಕಾರು ಚಲಾಯಿಸಿಕೊಂಡು ಯಾತ್ರೆ ಹೊರಟಿದ್ದೆ. ಸುಮಾರು ಮೂರು ತಾಸು ಸಂಚರಿಸಿಕೊಂಡು ಸಾಗರ ತಲುಪುತ್ತಿದ್ದಂತೆ ಮನೆಯಿಂದಲೂ , ನನ್ನೂರಿನಿಂದಲೂ ಆತಂಕದ ಕರೆಗಳು ಬರಲಾರಂಭಿಸಿದವು. ನಾನು ಏಕಾಂತವಾಗಿ ವಾಹನ ಚಲಾಯಿಸಿ ಬರುತ್ತಿದ್ದೆ. ನನ್ನ ಮನೆಯವರು, ಹಾಗೂ ಆಪ್ತರೆಲ್ಲರೂ ಕರೆಮಾಡಿ ಯಾತ್ರೆ ಅರ್ಧದಲ್ಲಿಯೇ ಮೊಟಕುಗೊಳಿಸಿ ಸವಣೂರು ಹಿಂದಿರುಗುವಂತೆ ಸಲಹೆ ಕೊಟ್ಟರು. ಆದರೆ ನನ್ನ ಮನಸ್ಸು ಮಾತ್ರ ಒಪ್ಪಲಿಲ್ಲ. ನನ್ನ ಜೀವನದುದಕ್ಕೂ ಧರ್ಮ ಭೇದಮನ್ಯೆ ಪ್ರೀತಿಸುವ ಸಹೃದಯರನ್ನೇ ಕಾಣುತ್ತಾ ಬಂದಿರುವುದರಿಂದ ಅಸುರರ ಕಣ್ಣಿಗೆ ನಾನು ಬೀಳಲಾರೆ ಅನ್ನುವ ಧೃಢವಾದ ನಂಬಿಕೆ ನನಗಿತ್ತು. ಒಂದಿಷ್ಟು ಧೈರ್ಯದಿಂದಲೇ ಗಾಡಿ ಚಲಾಯಿಸುತ್ತಾ ಬಂದೆ. ಹೊಸ ನಗರ ದಾಟಿ ಅದೊಂದು ಕಾಡು ಪ್ರದೇಶಕ್ಕೆ ತಲುಪುತ್ತಿದ್ದಂತೆ ನನ್ನ ಕಾರಿನ ಚಕ್ರ ಪಂಕ್ಚರ್ ಆಯಿತು.  

ಬಿಡುವಿಲ್ಲದ ಯಾತ್ರೆ ಹಾಗೂ ಒಂದಿಷ್ಟು ಅಸಡ್ಡೆಯಿಂದಾಗಿ ಯಾವುದೇ ಪೂರ್ವ ತಯಾರಿ ಮಾಡಿರಲಿಲ್ಲ. ನನ್ನ ಕಾರು ಬಾಕಿಯಾದ ಆ ಕುಗ್ರಾಮದಲ್ಲಿ ಒಬ್ಬನೇ ಒಬ್ಬ ಜನ ಇಲ್ಲ. ಕಾರು ಚಲಾಯಿಸಬೇಕಾದರೆ ಸ್ಟೆಪಿನ್‌ನಲ್ಲಿರುವ ಚಕ್ರವನ್ನು ದುರಸ್ಥಿ ಮಾಡಿತರಬೇಕಿತ್ತು. ಯಾರಾದರೂ ಸಹಾಯಕ್ಕೆ ಬರಬಹುದೇ ಎಂಬ ನಿರೀಕ್ಷೆಯೊಂದಿಗೆ ರಸ್ತೆ ಬದಿಯಲ್ಲಿ ಕಾದು ನಿಂತೆ. ಹಲವು ಗಾಡಿಗಳು ಸಾಗಿದರೂ ಯಾರೂ ನಿಲ್ಲಿಸಿ ವಿಚಾರಿಸಲು ಮುಂದಾಗಿಲ್ಲ. ಸ್ವಲ್ಪ ಹೊತ್ತರಲ್ಲಿ ಒಂದು ಗಾಡಿ ಹಿಂದುರುಗಿ ಬರುವುದು ಕಂಡಿತು. ಸುಮಾರು ಹತ್ತು ನಿಮಿಷ ಮುಂಚೆ ಆ ಗಾಡಿ ಕೂಡಾ ನನ್ನ ಕಣ್ಣ ಮುಂದೆಯೇ ಹೋಗುವುದು ಕಂಡಿದ್ದೆ. ರಿವರ್ಸ್ ಹೊಡೆದು ನನ್ನ ಬಳಿ ಬಂದು ಏನಾದರೂ ಸಹಾಯ ಬೇಕಿತ್ತೆ ಅಂತ ಕೇಳಿದರು. ಈ ಟಯರ್‌ಗೆ ಪ್ಯಾಚ್ ಹಾಕಲು ಹೊಸನಗರದ ಕಡೆಗೆ ಹೋಗಬೇಕಿತ್ತು ಅಂದೆ. ತಕ್ಷಣವೇ ಅವರ ಕಾರಲ್ಲಿ ನನ್ನನ್ನು ಹೊಸ ನಗರಕ್ಕೆ ಕೊಂಡು ಹೋಗಿ ಒಂದು ಗ್ಯಾರೇಜ್‌ನತ್ತ ಡ್ರಾಪ್ ಮಾಡಿದರು. ಆ ವ್ಯಕ್ತಿ ಉಡುಪಿ ಮೂಲದ ಮನೋಹರ್ ಎಂದಾಗಿತ್ತು. ಗ್ಯಾರೇಜ್‌ನ ಮಾಲಿಕ ಕೂಡಾ ಹಿಂದೂ ಸಹೋದರ. ಚಕ್ರ ಸಿದ್ದಪಡಿಸಿ ಕೈ ತೊಳೆಯಲಿಲ್ಲ. ಅವರೇ ಅಟೋವನ್ನು ಕರೆಸಿ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ವಾಹನವಿರುವ ಸ್ಥಳಕ್ಕೆ ನನ್ನ ಜೊತೆ ಬಂದು ಎಲ್ಲವನ್ನೂ ರೆಡಿ ಮಾಡಿಕೊಟ್ಟರು. ಅಷ್ಟೇನೂ ಮಾಡಬೇಕಾದ ಅಗತ್ಯವಿರಲಿಲ್ಲ. ಹಣಸುಲಿಯುವ ಮನಸ್ಥಿತಿ ಕೂಡಾ ಅವರಿಗಿರಲಿಲ್ಲ. ನಿಜಕ್ಕೂ ಆ ಇಬ್ಬರು ಸಹೋದರರು ನನ್ನ ಪಾಲಿಗೆ ಆಪ್ತ ಭಾಂದವರಾಗಿದ್ದರು. ಕಳೆದ ವಾರ ಕೂಡಾ ಇಂತಹದ್ದೊಂದು ವಾಹನ ದುರಂತವನ್ನು ಎದುರಿಸ ಬೇಕಾಗಿ ಬಂತು. ನನ್ನ ಹಾಗೂ ಸಹೋದರಿಯ ಮಕ್ಕಳು ಸೇರಿದಂತೆ ಹತ್ತು ಜನ ಊರಿನಿಂದ ಹಾವೇರಿ ಕಡೆಗೆ ಬರುತ್ತಿದ್ದೆವು. ಸಾಗರ ಹತ್ತಿರದ ಪುರಪ್ಪಣೆ ಎಂಬ ಹಳ್ಳಿಯಲ್ಲಿ ಬೆಳಗ್ಗೆ ಜಾವ ಚಾಲಕರ ನಿಯಂತ್ರಣ ತಪ್ಪಿ ಗಾಡಿ ಹಳ್ಳಕ್ಕೆ ಬಿದಿತ್ತು. ಆಗಲೂ ನೆರವಿಗೆ ಓಡಿ ಬಂದವರು ಸುಂದರಂ ಅನ್ನುವ ಸಹೋದರ. ನನ್ನ ಕೈಯಲ್ಲಿದ್ದ ಮಗುವನ್ನು ಕಾರಿನ ಒಳಗಿನಿಂದಲೇ ಎತ್ತಿ ನನ್ನ ಕೈ ಹಿಡಿದು ಹೊರಗೆ ತಂದರು. ಬಜ್ಪೆಯಿಂದ ಹೋಗಿ ಆ ಊರಲ್ಲಿ ಅಂಗಡಿ ಮಾಡಿದ ಹಿಂದೂ ಸಹೋದರ ನಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿದರು. ನಮ್ಮ ಜೊತೆಗಿದ್ದ ಮಹಿಳೆಯರಿಗೆ ಅವರ ಮನೆಯಲ್ಲಿ ಅಗತ್ಯ ಪೂರೈಸುವುದಕ್ಕಾಗಿ ಅನುವು ಮಾಡಿಕೊಟ್ಟರು. ಸಾಗರದ ಮನೋರಮ್ ,ಪರಪ್ಪೂರನ ಸುಂದರಂ ಸೇರಿದ ಹೃದಯವಂತರಿಗೆ ಧರ್ಮ ನಾಮಗಳು ಸಂಕಟದಲ್ಲಿದ್ದ ನಮಗೆ ಕರುಣೆ ತೋರಿಸಲು ತಡೆಯಾಗಲಿಲ್ಲ. ನಾವು ಕೂಡಾ ಸರ್ವರನ್ನೂ ಪ್ರೀತಿಸುವವರಾದರೆ ನಮ್ಮ ಮೇಲೂ ಕರುಣ್ಯಾನುಭವಗಳ ಸ್ಪರ್ಶ ವಾಗುತ್ತದೆ . ಕಳೆದ ತಿಂಗಳ 26 ನೇ ದಿನಾಂಕ ಸಹೋದರಿ ಮಗಳ ಮದುವೆಗಾಗಿ ಚಾರ್ಮಾಡಿಯಿಂದ ಸುಳ್ಯದ ಕಡೆಗೆ ಹೋಗುತ್ತಿದ್ದೆ. ನಮ್ಮ ಜೊತೆ ಬೇರೆ ಕೆಲವು ಕಾರುಗಳಿದ್ದವು. ಆ ಪೈಕಿ ಕಾರೊಂದಕ್ಕೆ ಧರ್ಮ ಸ್ಥಳದ ಪೈಕಿ ಹಿಂದೂ ಸಹೋದರನೊಬ್ಬ ಸ್ಕೂಟಿಯಲ್ಲಿ ಬಂದು ಡಿಕ್ಕಿ ಹೊಡೆದ. ಅನಾಹುತಗಳೇನೂ ಸಂಭವಿಸಿರಲಿಲ್ಲ. ಆದರೆ ಆ ಬೆಲೆಬಾಳುವ ಹೊಸ ಕಾರಿನ ಒಂದಿಷ್ಟು ಪೈಂಟ್ ಹೋಗಿತ್ತು.ಸ್ಕೂಟಿಯವ ತಪ್ಪೊಪ್ಪಿ ಕೊಂಡ್ಡಿದ್ದ. ಅದೇನೋ ಲೆಕ್ಕಚಾರ ಮಾಡಿ ಕಾರು ಮಾಲಕ ಆ ಸ್ಕೂಟಿಯವನಲ್ಲಿ ನಾಲ್ಕು ಸಾವಿರ ಕೇಳಿದ. ಬಡವನಾಗಿದ್ದ ಆ ಸ್ಕೂಟಿ ಚಾಲಕ ತನ್ನ ಕೈಯಲ್ಲಿದ್ದ ಒಂದು ಸಾವಿರ ಕೊಟ್ಟು ಬಿಟ್ಟ. ಕಾರಿನ ಚಾಲಕ ಅದು ಸಾಲದು ಅನ್ನುವ ಕಾರಣಕ್ಕೆ ಪಡೆಯಲು ನಿರಾಕರಿಸಿದರೂ ಸೇರಿದ ನಮ್ಮೆಲ್ಲರ ಒತ್ತಾಯಕ್ಕೆ ಮಣೆದು ಆ ಸಾವಿರಕ್ಕೆ ಸಮಾದಾನ ಮಾಡಿಕೊಂಡು ಹೊರಟು ಬಿಟ್ಟ. ನಿಜಕ್ಕೂ ನನಗೆ ಆ ಸ್ಕೂಟಿ ಚಾಲಕನನ್ನು ಕಂಡು ತುಂಬಾ ಕನಿಕರ ಮೂಡಿತ್ತು. ಏನಿಲ್ಲಾ ಅಂದರು ಅವರಿಗೆ ಐವತ್ತು ವರ್ಷ ದಾಟಿರಬಹುದು. ಆತನ ಪರ್ಸ್ ನಲ್ಲಿದದ್ದು ಆ ಕೊಟ್ಟ ಒಂದು ಸಾವಿರ ಬಿಟ್ಟರೆ ಇನ್ನು ಕೇವಲ ಇಪ್ಪತ್ತು ಮಾತ್ರ. ಆ ದಿನ ಬೆಳಿಗ್ಗೆಯೇ ತನ್ನ ಒಂದು ಸಾವಿರ ಹೋಯಿತಲ್ವ ಅನ್ನುವ ಸಂಕಟದಲ್ಲಿದ್ದ. ಅವನ ನೋವು ಅವನ ಮುಖದಲ್ಲಿ ಎದ್ದು ಕಂಡಿತ್ತು. ನಾನು ಅವರನ್ನು ಹತ್ತಿರಕ್ಕೆ ಕರೆಸಿ ನನ್ನ ಜೇಬಿನಿಂದ ಒಂದು ಸಾವಿರ ರುಪಾಯಿ ಕೊಟ್ಟೆ. ಬೇಸರ ಮಾಡ ಬೇಡ ಎಂದು ಸಮಾಧಾನ ಪಡಿಸಿದೆ. ನಿಜಕ್ಕೂ ಆ ವ್ಯಕ್ತಿಗೆ ತುಂಬಾ ಸಂತೋಷ ವಾಯಿತು.ಅವರಿಗೆ ಆ ಒಂದು ಸಾವಿರ ಬಹಳ ಮುಖ್ಯ ವಾಗಿತ್ತು. ನನಗೆ ಅವರಿಗಿಂತಲೂ ಮಿಗಿಲಾದ ಸಂತೋಷ ವಾಯಿತು. 

ಅವತ್ತು ಸಂಜೆ ಮಂಗಳೂರಿನ ಉಧ್ಯಮಿ ಯೊಬ್ಬರಲ್ಲಿ ಮಾತಿನ ಈ ಮಧ್ಯೆ ಈ ವಿಷಯ ಹಂಚಿಕೊಂಡೆ. ಆ ಹಿಂದೂ ಸಹೋದರನಿಗೆ ನಾನು ಕೊಟ್ಟ ಒಂದುಸಾವಿರ ರುಪಾಯಿಗೆ ಬದಲು ಹತ್ತು ಸಾವಿರ ನೀಡಿ ನನ್ನನ್ನು ಸಂತೋಷ ಪಡಿಸಿದರು. ಧರ್ಮ,ಜಾತಿ ಗಳ ಭೇದಮನ್ಯೆ ಕರುಣೆ ತೋರಿಸಿಧ್ದಕ್ಕಾಗಿತ್ತು ಅವರ ಗಿಫ್ಟ್. ಒಟ್ಟಿನಲ್ಲಿ ಧರ್ಮ-ಜಾತಿಗಳ ಭೇದಮನ್ಯೆ ಮನುಷ್ಯರನ್ನು ಪ್ರೀತಿಸುವವರು ಸಾಕಷ್ಟು ಜನ ಇದ್ದಾರೆ. ಆದರೆ ರಾಕ್ಷಸರು ಅದೇನೋ ಕ್ಷುದ್ರ ಶಕ್ತಿ ಯನ್ನು ಬಳಸಿ ಮುಖ್ಯ ಧಾರೆಯಲ್ಲಿ ಅಟ್ಟಹಾಸ ಮರೆಯುವುದರಿಂದ ನಮ್ಮ ಸುಂದರ ಪ್ರಶಾಂತ ಕರವಾಳಿ, ಬದುಕಲು ಅಯೋಗ್ಯ ಭೂಮಿ ಯಾಗುತ್ತದೆಯೋ ಅನ್ನುವ ಭಯ ಕಾಡುತ್ತಿದೆ.ಧರ್ಮ-ಜಾತಿ ಭೇದಮನ್ಯೆ ಸಹೃದಯರನ್ನು ಒಗ್ಗೂಡಿಸಲು ಪ್ರಯತ್ನಿಸುದೊಂದೇ ಪರಿಹಾರ.

ಬರಹ:- ಕೆ.ಎಂ ಮುಸ್ತಫಾ ನಈಮಿ ಅಲ್ ಹಿಮಮಿ ಹಾವೇರಿ

Related Posts