Featured, ಅಂಕಣ, ಲೇಖನ, ಸ್ಥಳೀಯ

ನನ್ನ ಕನಸಿನ ಭಾರತ

ಇದು 2047ನೇ ಇಸವಿ – ಸ್ವಾತಂತ್ರ್ಯದ ಶತಮಾನೋತ್ಸವದ ವರ್ಷ. ನಾನು ನವದೆಹಲಿಯ ಇಂಡಿಯಾ ಗೇಟ್ ಮುಂದೆ ನಿಂತಿದ್ದೇನೆ. ನನ್ನ ಸುತ್ತಲೂ ನಗು, ಶಾಂತಿ, ಸಮೃದ್ಧಿ ರಾರಾಜಿಸುತ್ತಿದೆ; ಎಲ್ಲೆಡೆ ಪ್ರಗತಿಯ ಪಾದಚಿಹ್ನೆಗಳು. ಯಾರೂ ಭಿಕ್ಷೆ ಬೇಡುತ್ತಿಲ್ಲ, ಯಾರೂ ಹಸಿವಿನಿಂದ ನರಳುತ್ತಿಲ್ಲ, ಯಾರೂ ನಿರಕ್ಷರರಲ್ಲ, ನಿರಾಶೆಯ ಮುಖಗಳಿಲ್ಲ. ಮಕ್ಕಳು ಆಟವಾಡುತ್ತಾ ನಗುತ್ತಿದ್ದಾರೆ, ಯುವಕರು ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಬೇಧವಿಲ್ಲದ ಸೌಹಾರ್ದ ಭಾರತದ ವಿಹಂಗಮ ನೋಟವನ್ನು ಕಣ್ಣಾರೆ ಕಾಣುತ್ತಿದ್ದೇನೆ. ಈ ದೃಶ್ಯ, ನನ್ನ ಮನಸ್ಸಿನಲ್ಲಿ ಚಿತ್ರಿಸಿರುವ, ನನ್ನ ಪುಟ್ಟ ಹೃದಯದಲ್ಲಿ ಬರೆದಿಟ್ಟಿರುವ ನನ್ನ ಕನಸಿನ ಭಾರತ. ಇದನ್ನು ನನಸು ಮಾಡಲು ನಾವು ಇಂದಿನಿಂದಲೇ ತೆಗೆದುಕೊಳ್ಳಬೇಕಾದ ಹೆಜ್ಜೆಗಳೇ ನನ್ನ ಮನದ ಮಾತು.

ನನ್ನ ಕನಸಿನ ಭಾರತವು ಕೇವಲ ಗಡಿ ಹೊಂದಿರುವ ನಕ್ಷೆಯಲ್ಲ, ಅದು ಹೃದಯ-ಹೃದಯಗಳನ್ನು ಬೆಸೆಯುವ ನಾಡು. ಇಲ್ಲಿ ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕು ಮತ್ತು ಹೊಣೆಗಾರಿಕೆಯನ್ನು ಅರಿತು ಬದುಕುತ್ತಿದ್ದಾನೆ. ಶಿಕ್ಷಣ ಎಲ್ಲರಿಗೂ ಲಭ್ಯವಾಗುತ್ತಿದೆ; ಅದು ಕೇವಲ ಅಂಕಗಳ ಸ್ಪರ್ಧೆಯಾಗದೆ, ಮೌಲ್ಯ, ನೈತಿಕತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಮಾಧ್ಯಮವಾಗಿದೆ.

ಈ ಭಾರತದಲ್ಲಿ ಬಡತನ, ಭ್ರಷ್ಟಾಚಾರ, ಜಾತಿ-ಮತಗಳ ಹೆಸರಿನ ವಿಭಜನೆ ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣ ಸಿಗುವ, ಓದುವಾಗ ‘ಹೀಗೊಂದು ಭಾರತವಿತ್ತೆ!’ ಎಂದು ಅಚ್ಚರಿಗೊಳ್ಳುವ ವಿಚಾರವಾಗಿ ಬಿಟ್ಟಿದೆ. ರೈತನು ಸಾಲದ ಬಾಧೆಯಿಂದ ಮುಕ್ತನಾಗಿ, ತಾನು ಬೆಳೆದ ಬೆಳೆಗಾಗಿ ನ್ಯಾಯಯುತ ಬೆಲೆ ಪಡೆಯುತ್ತಿದ್ದಾನೆ. ಯುವಕರು ನಿರುದ್ಯೋಗದಿಂದ ನರಳದೆ, ತಮ್ಮ ಆವಿಷ್ಕಾರ ಮತ್ತು ಕೌಶಲ್ಯದಿಂದ ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಬೆಳಗಿಸುತ್ತಿದ್ದಾರೆ.

ನನ್ನ ಕನಸಿನ ಭಾರತದ ದಾರಿಯಲ್ಲಿ ಕೆಲವು ಕತ್ತಲೆಯ ಕಾರ್ಮೋಡಗಳು ಆವರಿಸಿತ್ತು – ಧಾರ್ಮಿಕ ಕಲಹಗಳು ನಮ್ಮ ಸಮಾಜದ ಹೃದಯವನ್ನು ಹಾಳುಮಾಡುತ್ತಿತ್ತು. ಯಾವ ಧರ್ಮವಾದರೂ, ಅದರ ಅಂತರಾಳದ ಮೌಲ್ಯಗಳಾದ ಪ್ರೇಮ, ಶಾಂತಿ, ಸಹಿಷ್ಣುತೆ ಮೊದಲಾದವುಗಳನ್ನು ಬಿಟ್ಟು ಕೊಡುದಿಲ್ಲ, ಹೀಗಿರುವಾಗ ಕೆಲವು ತಪ್ಪು ಧಾರ್ಮಿಕ ಅರ್ಥೈಸಿಕೆಗಳು, ಅಹಂಕಾರ, ರಾಜಕೀಯ ಸ್ವಾರ್ಥ – ಇವೆಲ್ಲ ಒಟ್ಟಾಗಿ ಜನರನ್ನು ವಿಭಜಿಸುತ್ತಿತ್ತು. ಆದರೆ

ನನ್ನ ಕನಸಿನ ಭಾರತದಲ್ಲಿ, ಧಾರ್ಮಿಕ ಗುರುಗಳು, ಶಾಲೆಗಳು, ಮಾಧ್ಯಮಗಳು ‘ಐಕ್ಯತೆಯ ಭಾರತ’ ಎಂಬ ಉದಾತ್ತ ಸಂದೇಶವನ್ನು ಪ್ರತಿದಿನ ಹರಡತೊಡಗಿದರು, ಧರ್ಮದ ಹೆಸರಿನಲ್ಲಿ ಹೋರಾಟವಲ್ಲ, ಧರ್ಮದ ಹೆಸರಿನಲ್ಲಿ ಸೇವೆ ನಡೆಯತೊಡಗಿತು. ಶಿಕ್ಷಣವನ್ನು ಅಜ್ಞಾನ ನೀಗಿಸುವ ನಿಜವಾದ ಶಸ್ತ್ರವಾಗಿ ಬಳಸತೊಡಗಿದರು. ಎಲ್ಲಾ ಧರ್ಮಗಳ ಹಬ್ಬಗಳನ್ನು ಸರ್ಕಾರಿ ಮತ್ತು ಸಾಮಾಜಿಕ ಮಟ್ಟದಲ್ಲಿ ಒಟ್ಟಾಗಿ ಆಚರಿಸತೊಡಗಿದರು, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಪ್ರಚಾರವನ್ನು ತಡೆಗಟ್ಟುವ ಕಾನೂನುಗಳನ್ನು ಕಠಿಣವಾಗಿ ಜಾರಿಗೆ ತರಲಾಯಿತು. ಅತ್ಯಾಚಾರ ಪ್ರಕರಣಗಳು ನಮ್ಮ ದೇಶದ ಸತಿ-ಸಾವಿತ್ರಿ ಸಂಸ್ಕೃತಿಗೆ ಗಾಯಮಾಡುವ ದೊಡ್ಡ ಪಾಪವಾಗಿ ಪರಿಣಮಿಸಿತ್ತು, ಇದನ್ನು ಇಲ್ಲವಾಗಿಸಲು ಮಹಿಳೆಯರ ಭದ್ರತೆಗೆ ತಕ್ಷಣದ ನ್ಯಾಯ ನೀಡುವ ಫಾಸ್ಟ್-ಟ್ರ್ಯಾಕ್ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ನಗರ ಹಾಗೂ ಗ್ರಾಮ ಮಟ್ಟದಲ್ಲಿ ಹೆಚ್ಚುವರಿ ಸಿಸಿಟಿವಿ, ಸಾರ್ವಜನಿಕ ಸ್ಥಳಗಳಲ್ಲಿ ಬೆಳಕಿನ ಸೌಕರ್ಯವನ್ನು ಒದಗಿಸಲಾಯಿತು. ಶಾಲೆ ಮತ್ತು ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಹಾಗೂ ಲಿಂಗ ಸಮಾನತೆಯ ಪಾಠ ಪಠ್ಯಕ್ರಮದ ರೂಪದಲ್ಲಿ ಕಡ್ಡಾಯ ಶಿಕ್ಷಣವಾಗಿ ಚಾಲ್ತಿಯಾಗಿಸಲಾಯಿತು. ಪ್ರತಿಯೊಬ್ಬ ಪುರುಷನಿಗೂ “ಮಹಿಳೆಯರತ್ತ ಗೌರವ” ಬೆಳೆಸುವ ಕುಟುಂಬ ಸಂಸ್ಕಾರ ಮನೆ-ಮನೆಗಳಲ್ಲೂ ಬೆಳೆಸಲಾಯಿತು.

ಪ್ರಸಕ್ತವಾಗಿ ನನ್ನ ಕನಸಿನ ಭಾರತದಲ್ಲಿ ಮಹಿಳೆಯರು ಮದ್ಯರಾತ್ರಿ 12 ಗಂಟೆಯಾದರೂ ಯಾವುದೇ ಭಯವಿಲ್ಲದೆ ನಿರ್ಭಿತಿಯಿಂದ ಸುರಕ್ಷಿತವಾಗಿ ಒಬ್ಬಂಟಿಯಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದಾರೆ. ಕೋಮು ಸೌಹಾರ್ದತೆ ಮತ್ತು “ವೈವಿಧ್ಯತೆಯಲ್ಲಿ ಏಕತೆ” ಎಂಬ ತತ್ತ್ವ ದೇಶದ ಪ್ರತಿಯೊಂದು ಹೃದಯದಲ್ಲಿ ಬೇರೂರಿದೆ. ಭಗತ್ ಸಿಂಗ್ 1928ರ ಕೀರ್ತಿ ವೃತ್ತಪತ್ರಿಕೆಯ *COMMUNAL RIOTS AND THEIR SOLUTIONS* ಎಂಬ ಆರ್ಟಿಕಲ್ ನಲ್ಲಿ ಹೇಳಿದಂತೆ, ಕೋಮುಗಲಭೆಗಳ ಮೂಲ ಕಾರಣವಾದ ಆರ್ಥಿಕ ಅಸಮಾನತೆ ದೂರವಾಗಿದೆ. ದೇಶದ ಹಳ್ಳಿ ಗಲ್ಲಿಯೂ ಕೂಡ ಸಮಾರಸ್ಯದ ಬೀಡಾಗಿದೆ. ಫ್ಯಾಸಿಸ್ಟ್ ಶಕ್ತಿಗಳ ಮೂಲಕ ದೇಶವನ್ನು ಆಳುವ ಕುತಂತ್ರಗಳನ್ನು ಈ ಭವ್ಯ ರಾಷ್ಟ್ರದ ಪ್ರಬುದ್ಧ ಪ್ರಜೆಗಳು ಪರಕಾಯ ಗೊಳಿಸಿದ್ದಾರೆ.

ಗಾಂಧಿ ಕಂಡ ಕನಸು ನನಸಾಗಿ, ದೇಶ ರಾಮರಾಜ್ಯದ ದಾರಿಯಲ್ಲಿ ಸಾಗುತ್ತಿದೆ. ಇಲ್ಲಿನ ರಾಜಕಾರಣಿಗಳು ನೈಜ ಜನಸೇವಕರಾಗಿ, ಶಿಕ್ಷಿತರಾಗಿ, ಯುವ ಶಕ್ತಿಗಳಾಗಿ, ನಿಷ್ಠೆಯೊಂದಿಗೆ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಒಬ್ಬ ದಕ್ಷ ವೈದ್ಯ ಆರೋಗ್ಯ ಸಚಿವನಾಗಿ, ಒಬ್ಬ ತಜ್ಞ ಶಿಕ್ಷಕ ಶಿಕ್ಷಣ ಸಚಿವನಾಗಿ, ನಿಸ್ವಾರ್ಥ ಆಡಳಿತಗಾರರು ಜನಸೇವೆಗೆ ತೊಡಗಿರುವ ದೇಶವಾಗಿಬಿಟ್ಟಿದೆ ನನ್ನ ಮಹಾನ್ ಭಾರತ.

ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ನಮ್ಮ ಕೈಯಲ್ಲಿರುವ ಸಾಧನವಾಗಿದೆಯೇ ಹೊರತು ನಾವು ಅದರ ಗುಲಾಮರಾಗಿಲ್ಲ. ವೃದ್ದಾಶ್ರಮಗಳ ಸಂಖ್ಯೆ ಕಡಿಮೆಯಾಗಿದೆ; ಕುಟುಂಬ, ನೆರಹೊರೆಯವರು ಮತ್ತು ಸಮಾಜ – ಎಲ್ಲರೂ ಒಂದೇ ಪರಿವಾರದ ಸದಸ್ಯರಂತೆ ಬದುಕುತ್ತಿದ್ದಾರೆ.

ನನ್ನ ಕನಸಿನ ಭಾರತದಲ್ಲಿ ನಗರ ಮತ್ತು ಹಳ್ಳಿಯ ನಡುವೆ ವ್ಯತ್ಯಾಸವಿಲ್ಲ. ಎಲ್ಲೆಡೆ ಉತ್ತಮ ಆರೋಗ್ಯ ಸೇವೆ, ಶುದ್ಧ ಕುಡಿಯುವ ನೀರು, ಮತ್ತು ಸುಧಾರಿತ ಮೂಲಸೌಕರ್ಯ ದೊರೆಯುತ್ತಿದೆ. ಪರಿಸರ ಸಂರಕ್ಷಣೆಯನ್ನು ಪ್ರತಿ ನಾಗರಿಕರು ತಮ್ಮ ಧರ್ಮವೆಂಬಂತೆ ಆಚರಿಸುತ್ತಿದ್ದಾರೆ. ಹಸಿರು ಮರಗಳು, ಶುದ್ಧ ಗಾಳಿ, ಸ್ವಚ್ಛ ನದಿಗಳು ನಮ್ಮ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ.

ಭಾರತವು ವಿಶ್ವಕ್ಕೆ ಶಾಂತಿ, ಸಹಕಾರ ಮತ್ತು ಸಹಬಾಳ್ವೆಯ ವಿಷಯದಲ್ಲಿ ಮಾದರಿಯಾಗಿದೆ. “ವಸುಧೈವ ಕುಟುಂಬಕಂ” ಎಂಬ ತತ್ತ್ವವು ಕೇವಲ ಘೋಷಣೆಯಲ್ಲ, ನಮ್ಮ ದೈನಂದಿನ ಬದುಕಿನ ಮೂಲ ಸಿದ್ಧಾಂತವಾಗಿಬಿಟ್ಟಿದೆ. ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ, ಧೈರ್ಯದಿಂದ, ಅಭಿಮಾನದಿಂದ “ಇದು ನನ್ನ ದೇಶ, ನಾನು ಹೆಮ್ಮೆಯ ಭಾರತೀಯ” ಎಂದು ಹೇಳಿಕೊಳ್ಳುವ ದಿನ – ಅದೇ ನನ್ನ ಕನಸಿನ ಭಾರತದ ಉದಯಕಾಲ.

ನನ್ನ ಕನಸಿನ ಭಾರತವು ಕೇವಲ ನಾನು ಬಯಸಿದ ರಾಷ್ಟ್ರವಲ್ಲ – ಅದು ನಾವು ಎಲ್ಲರೂ ಸೇರಿ ನಿರ್ಮಿಸುವ ಈ ದೇಶದ ಭವಿಷ್ಯ. ನಮ್ಮ ಶ್ರಮ, ಪ್ರಾಮಾಣಿಕತೆ, ಮತ್ತು ಏಕತೆಯಿಂದ, ಈ ಕನಸು ನಿಜವಾಗಲಿದೆ. ‘ಸರ್ವಜನ ಸುಖಿನೋ ಭವಂತು’ ಎನ್ನುವ ಶಬ್ದಗಳು ಪ್ರತಿಯೊಬ್ಬರ ಜೀವನದಲ್ಲಿ ನಿಜವಾಗುವ ದಿನವೇ, ನನ್ನ ಕನಸಿನ ಭಾರತದ ಅರುಣೋದಯ.

ಬರಹ:ಮಹಮ್ಮದ್ ರಾಝಿಕ್ ಮಾಲಾಡಿ

m

Related Posts