ಸುಳ್ಯ, ನ.1: ಸುಳ್ಯದ ಪತ್ರಿಕಾ ರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ, ಛಾಯಾಗ್ರಾಹಕ ಹಾಗೂ ಪಯಸ್ವಿನಿ ಪತ್ರಿಕೆಯ ಸಂಪಾದಕ ಜೆ.ಕೆ. ರೈ ಎಂದೇ ಚಿರಪರಿಚಿತರಾಗಿದ್ದ ಜಯಕೃಷ್ಣ ರೈ (54) ಅವರು ಶನಿವಾರ (ಅ.31) ರಾತ್ರಿ 11 ಗಂಟೆಗೆ ನಿಧನರಾದರು.
ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯ ಮತ್ತಷ್ಟು ಕ್ಷೀಣಿಸಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 28ರಂದು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದ ಅವರನ್ನು ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಆಲೆಟ್ಟಿ ನಾರ್ಕೋಡಿನ ನಿವಾಸಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಬದುಕಿಗಾಗಿ ನಡೆಸಿದ ಹೋರಾಟ ಫಲಿಸದೆ ರಾತ್ರಿ 11 ಗಂಟೆಗೆ ಅವರು ಕೊನೆಯುಸಿರೆಳೆದರು.
ಕ್ಯಾಮೆರಾದೊಂದಿಗೆ ಆರಂಭವಾದ ಪತ್ರಿಕಾ ಪಯಣ
ಸುಳ್ಯದ ಗಾಂಧಿನಗರ ನಿವಾಸಿ, ನಿವೃತ್ತ ಫಾರೆಸ್ಟರ್ ನಾರಾಯಣ ರೈ ಹಾಗೂ ದಿವಂಗತ ಕಮಲ ರೈ ದಂಪತಿಯ ಎರಡನೇ ಪುತ್ರರಾಗಿದ್ದ ಜಯಕೃಷ್ಣ ರೈ ಅವರು ಬಾಲ್ಯದಿಂದಲೇ ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು.
ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ವೃತ್ತಿಪರ ಛಾಯಾಗ್ರಾಹಕರಾಗಬೇಕೆಂಬ ಕನಸಿನೊಂದಿಗೆ ಕ್ಯಾಮೆರಾ ಖರೀದಿಸಿದ್ದ ಅವರು, 1991ರಲ್ಲಿ ಸುಳ್ಯದಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಛಾಯಾಗ್ರಾಹಕರಾಗಿ ಮುನ್ನೆಲೆಗೆ ಬಂದರು. ಆ ಬಳಿಕ ಪತ್ರಿಕೆಯೊಂದರ ಫೋಟೋ ಜರ್ನಲಿಸ್ಟ್ ಆಗಿ ಸುದ್ದಿಜಗತ್ತಿಗೆ ಪ್ರವೇಶಿಸಿದ ಅವರು, ಛಾಯಾಗ್ರಹಣದ ಜೊತೆಗೆ ಪತ್ರಿಕಾ ವರದಿಗಾರಿಕೆಯನ್ನು ತಮ್ಮ ವೃತ್ತಿಜೀವನದ ಭಾಗವನ್ನಾಗಿಸಿಕೊಂಡರು.
ವೃತ್ತಿಪರ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಜೆ.ಕೆ. ರೈ ಅವರು ‘ಚೈತ್ರ ಡ್ರೈವಿಂಗ್ ಸ್ಕೂಲ್’ ಎಂಬ ವಾಹನ ಚಾಲನಾ ತರಬೇತಿ ಕೇಂದ್ರವನ್ನೂ ಸ್ಥಾಪಿಸಿ ಮುನ್ನಡೆಸುತ್ತಿದ್ದರು.
ಬಳಿಕ ಸಂಜೆ ಪತ್ರಿಕೆಯೊಂದರ ವರದಿಗಾರರಾಗಿ ಕಾರ್ಯನಿರ್ವಹಿಸಿದ ಅವರು, ಹಿರಿಯ ಪತ್ರಕರ್ತ ಅಬ್ದುಲ್ ಸತ್ತಾರ್ ಗೋರಡ್ಕ ಅವರ ನಿಧನದ ನಂತರ ಪಯಸ್ವಿನಿ ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಪತ್ರಕರ್ತರ ಸಂಘಟನೆಯಲ್ಲೂ ಮುಂಚೂಣಿಯ ಪಾತ್ರ
ಸುಳ್ಯದಲ್ಲಿ ಮೊದಲ ಬಾರಿಗೆ ಪತ್ರಕರ್ತರ ಸಂಘ ಸ್ಥಾಪನೆಯಾದ ಸಂದರ್ಭದಲ್ಲಿ ಅದರ ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಜೆ.ಕೆ. ರೈ ಅವರು, ಬಳಿಕ ಸುಳ್ಯ ಪ್ರೆಸ್ ಕ್ಲಬ್ ರಚನೆಯಾದಾಗ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಪತ್ರಿಕೋದ್ಯಮವನ್ನು ಕೇವಲ ಸುದ್ದಿಗಳ ಸಂಗ್ರಹ ಮತ್ತು ಪ್ರಕಟಣೆಗೆ ಸೀಮಿತಗೊಳಿಸದೆ, ಪತ್ರಕರ್ತರ ಸಂಘಟನೆ ಹಾಗೂ ವೃತ್ತಿಪರ ಒಗ್ಗಟ್ಟಿಗೂ ಮಹತ್ವ ನೀಡಿದ್ದ ಅವರು ಸುಳ್ಯದ ಪತ್ರಿಕಾ ಇತಿಹಾಸದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿದ್ದರು.
ಕೈಯಲ್ಲಿ ಕ್ಯಾಮೆರಾ ಹಿಡಿದು ಸುದ್ದಿಯ ಹುಡುಕಾಟಕ್ಕೆ ಹೊರಟಿದ್ದ ಜೆ.ಕೆ. ರೈ ಅವರ ಬದುಕಿನ ಪಯಣ ಇದೀಗ ನಿಂತಿದೆ. ಆದರೆ ಅವರು ಸೆರೆಹಿಡಿದ ಚಿತ್ರಗಳು, ದಾಖಲಿಸಿದ ಸುದ್ದಿಗಳು ಹಾಗೂ ಪತ್ರಿಕಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸುಳ್ಯದ ಪತ್ರಿಕೋದ್ಯಮದ ನೆನಪುಗಳಲ್ಲಿ ಉಳಿಯಲಿವೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಸುಳ್ಯದ ಪತ್ರಿಕಾ ಲೋಕದೊಂದಿಗೆ ಗುರುತಿಸಿಕೊಂಡಿದ್ದ ಜೆ.ಕೆ. ರೈ ಅವರ ನಿಧನ ಸ್ಥಳೀಯ ಪತ್ರಿಕಾ ಕ್ಷೇತ್ರಕ್ಕೆ ನೋವು ತಂದಿದೆ. ಒಂದು ಕಾಲದಲ್ಲಿ ಸುದ್ದಿಗಳ ಬೆನ್ನಟ್ಟಿ ನಡೆದಾಡುತ್ತಿದ್ದ ಪತ್ರಕರ್ತನ ಬದುಕೇ ಇಂದು ನೋವಿನ ಸುದ್ದಿಯಾಗಿ ಮಾರ್ಪಟ್ಟಿರುವುದು ವಿಷಾದನೀಯ.
ಕುಟುಂಬ ವರ್ಗ
ಮೃತರು ಪತ್ನಿ ಜಯಲಕ್ಷ್ಮಿ, ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಪುತ್ರಿ ಶಮಿತಾ ರೈ, ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರ ಪ್ರಮಿತ್ ರೈ, ತಂದೆ ನಾರಾಯಣ ರೈ, ಹಿರಿಯ ಸಹೋದರ ಹಾಗೂ ಸುಳ್ಯ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ರಾಮಕೃಷ್ಣ ರೈ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಕಿರಿಯ ಸಹೋದರ ಹರಿಕೃಷ್ಣ ರೈ ಸೇರಿದಂತೆ ಕುಟುಂಬಸ್ಥರು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.